Home ಸುದ್ಧಿಗಳು ಪ್ರಾದೇಶಿಕ ಮಳೆಯಿಂದ ಜೀವ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ

ಮಳೆಯಿಂದ ಜೀವ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ

355
0

ಉಡುಪಿ: ರಾಜ್ಯದಲ್ಲಿ ಮುಂಗಾರು ಮಳೆಯ ಪ್ರಾಕೃತಿಕ ವಿಕೋಪದಿಂದ ಯಾವುದೇ ಮಾನವ ಮತ್ತು ಜಾನುವಾರುಗಳ ಜೀವ ಹಾನಿಯಾಗದಂತೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು. ಅವರು ಮಂಗಳವಾರ ವೀಡಿಯೋ ಸಂವಾದದ ಮೂಲಕ ರಾಜ್ಯದಲ್ಲಿ ಅಧಿಕವಾಗಿ ಮಳೆಯಾಗುತ್ತಿರುವ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದರು.

ಮುಂಗಾರು ಮಳೆಯ ವಿಕೋಪ ಸಂದರ್ಭದಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ. ಯಾವುದೇ ಜೀವ ಹಾನಿಯಾದಗಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ರಾಜ್ಯದಲ್ಲಿ 4 ಎನ್.ಡಿ.ಆರ್.ಎಫ್, ಮತ್ತು ಎಸ್.ಡಿ.ಆರ್.ಎಫ್ ತಂಡಗಳು ವಿಕೋಪ ನಿರ್ವಹಣೆಗೆ ನೆರವು ನೀಡಲು ಸಿದ್ಧವಾಗಿದ್ದು, ಅಗತ್ಯವಿದ್ದಲ್ಲಿ ಕೂಡಲೇ ನೆರವು ಪಡೆಯಿರಿ ಎಂದ ಸಿಎಂ ಯಡಿಯೂರಪ್ಪ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಕೋಪ ತಡೆಗೆ ಅಗತ್ಯವಿರುವ ಸುರಕ್ಷತಾ ಉಪಕರಣಗಳನ್ನು ಹಾಗೂ ಕಾಳಜಿ ಕೇಂದ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ 24*7 ಕಂಟ್ರೋಲ್ ರೂಂ ಗಳನ್ನು ತೆರೆದು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣದಲ್ಲಿ ಸ್ಪಂದಿಸಿ, ಜನರ ಸ್ಥಳಾಂತರ ಸಂದರ್ಭದಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಂದರು.

ಅತಿವೃಷ್ಠಿಯಿಂದ ಹಾನಿಗೊಳಗಾದವರಿಗೆ ಶೀಘ್ರದಲ್ಲಿ ಪರಿಹಾರ ವಿತರಿಸಿ. ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಇರಲಿ. ವಿಕೋಪ ನಿರ್ವಹಣೆಗೆ ರಾಜ್ಯದಲ್ಲಿ ಯಾವುದೇ ಹಣಕಾಸಿನ ಕೊರತೆ ಇಲ್ಲ. ವಿಕೋಪ ಸಂದರ್ಭದಲ್ಲಿ ಎಲ್ಲಾ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯಿರಿ ಹಾಗೂ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದು ಸಿಎಂ ಹೇಳಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ವಿಕೋಪ ನಿರ್ವಹಣೆಗೆ ಈಗಾಗಲೇ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಯಾವುದೇ ಸಂದರ್ಭವನ್ನು ಎದುರಿಸಲು ಸಿದ್ದರಾಗಿದ್ದೇವೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮಂಗಳೂರಿನಲ್ಲಿರುವ ಎನ್.ಡಿ.ಆರ್.ಎಫ್ ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ. ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಅಗತ್ಯವಿರುವ ಗ್ರಾಮ ಪಂಚಾಯತ್‌ಗಳಿಗೆ ಫೈಬರ್ ದೋಣಿಗಳನ್ನು ನೀಡಲಾಗಿದೆ. 24*7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ. ಎಲ್ಲಾ ಅಧಿಕಾರಿಗಳಿಗೆ ಪ್ರಾಕೃತಿಕ ವಿಕೋಪ ತಡೆಯಲು ಸನ್ನದ್ಧರಿರುವಂತೆ ಸೂಚನೆ ನೀಡಲಾಗಿದ್ದು, ಮಾನ್ಸೂನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ 1 ಜೀವ ಹಾನಿ, 5 ಮನೆಗಳು ಪೂರ್ಣ ನಾಶ, 196 ಮನೆಗಳು ಭಾಗಶಃ ಹಾನಿ, 14 ಕೊಟ್ಟಿಗೆಗಳಿಗೆ ಹಾನಿಯಾಗಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 5.90 ಕೋಟಿ ರೂ. ಗಳ ಹಣ ಇದ್ದು, ಹಣದ ಕೊರತೆ ಇಲ್ಲ ಎಂದರು.

ವೀಡಿಯೋ ಸಂವಾದದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್ಪಿ ವಿಷ್ಣುವರ್ಧನ್, ನಕ್ಸಲ್ ನಿಗ್ರಹ ಪಡೆಯ ಎಸ್ಪಿ ಅಖಿಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.