ವಿಶ್ವ ರಕ್ತದಾನಿಗಳ ದಿನವನ್ನು 2021 ರ ಜೂನ್ 14 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ರಕ್ತದಾನ ಮತ್ತು ಸುರಕ್ಷಿತ ರಕ್ತ ಮತ್ತು ರಕ್ತ ಉತ್ಪನ್ನಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರವು ವಿಶ್ವ ರಕ್ತದಾನಿಗಳ ದಿನವನ್ನು ಸೋಮವಾರ ಆಚರಿಸಿತು. ಕೋವಿಡ್ -19 ನಿಯಮಾವಳಿಗಳನ್ನು ಅನುಸರಿಸಿ, ರಕ್ತದಾನಿಗಳನ್ನು ಪ್ರೇರೇಪಿಸುವಲ್ಲಿ ಹೆಚ್ಚಿನ ಕೊಡುಗೆ ನೀಡಿದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶರತ್ ಕೆ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ವರ್ಷದ ಧ್ಯೇಯವಾದ ‘ರಕ್ತ ನೀಡಿ ಮತ್ತು ಜಗತ್ತಿನ ಹೃದಯ ಬಡಿತ ಉಳಿಸಿರಿ’ ಎಂಬ ವಿಷಯದ ಕುರಿತು ಮಾತನಾಡಿ ರಕ್ತದಾನದ ಮಹತ್ವವನ್ನು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ, ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಜೀವ ಉಳಿಸಲು ಮುಂದಾಗಿರುವ ಸ್ವಯಂಪ್ರೇರಿತ ರಕ್ತದಾನಿಗಳನ್ನು ಶ್ಲಾಘಿಸಿದರು ಮತ್ತು ಲಸಿಕಾ ಪೂರ್ವ ರಕ್ತದಾನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮತ್ತು ರತ್ನಾಕರ್ ಸಾಮಂತ್ ಕೂಡ ಯುವಜನರಲ್ಲಿ, ಸ್ವಯಂಪ್ರೇರಿತವಾಗಿ ರಕ್ತದಾನಕ್ಕಾಗಿ ಮುಂದೆ ಬರಲು ಪ್ರೇರೇಪಿಸಿದರು. ಎಂಐಟಿಯ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಮದ್ದೋಡಿ ಉಪಸ್ಥಿತರಿದ್ದರು. 2020ರ ಡಾ. ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನೀಡುವ ಅತ್ಯುತ್ತಮ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ಪ್ರಶಸ್ತಿಗಳನ್ನು, ರಶ್ಮಿ ಮತ್ತು ಕೃಷ್ಣಮೂರ್ತಿ ರಾವ್ ರವರಿಗೆ ನೀಡಲಾಯಿತು. ಅಭಯ ಹಸ್ತ ಹೆಲ್ಪ್‌ಲೈನ್ 2020 ರಲ್ಲಿ ಅತಿ ಹೆಚ್ಚು ರಕ್ತದಾನ ಡ್ರೈವ್ಗಳನ್ನು ಆಯೋಜಿಸಿದ್ದಕ್ಕಾಗಿ ಪ್ರಶಸ್ತಿಯನ್ನು ಪಡೆಯಿತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ರಕ್ತದಾನಿಗಳನ್ನು ಸಂಘಟಿಸಿದ ಪ್ರಯತ್ನಗಳಿಗಾಗಿ ಸತೀಶ್ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದ ನಿರ್ದೇಶಕಿ ಡಾ. ಶಮೀ ಶಾಸ್ತ್ರಿ ಸ್ವಾಗತಿಸಿ, ಈ ವರ್ಷದ ಅಭಿಯಾನದ ವಿಶೇಷ ಗಮನವು “ಸುರಕ್ಷಿತ ರಕ್ತ ಪೂರೈಕೆಯನ್ನು ಖಾತ್ರಿಪಡಿಸುವಲ್ಲಿ ಯುವಜನರ ಪಾತ್ರ” ವಿಚಾರದ ಕುರಿತು ಮಾತನಾಡಿದರು. 70 ಕ್ಕೂ ಹೆಚ್ಚು ಸ್ವಯಂಪ್ರೇರಿತ ರಕ್ತದಾನಿಗಳು ರಕ್ತದಾನದಲ್ಲಿ ಭಾಗವಹಿಸಿದ್ದರು.