ರಾಜಕೋಟ್: (ಉಡುಪಿ ಬುಲೆಟಿನ್ ವರದಿ) ಸೂರ್ಯಕುಮಾರ್ ಯಾದವ್ ಅಬ್ಬರದ ಶತಕದ ಸಹಾಯದಿಂದ ಶ್ರೀಲಂಕಾ ವಿರುದ್ಧ ಭಾರತ ಟಿ20 ಸರಣಿಯನ್ನು ಅತ್ಯಾಕರ್ಷಕವಾಗಿ ಗೆದ್ದಿದೆ. ಶನಿವಾರ ರಾಜಕೋಟ್ ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ರನ್ ವೇಗವನ್ನು ಶುಭ್ಮನ್ ಗಿಲ್ ಮತ್ತು ರಾಹುಲ್ ತ್ರಿಪಾಠಿ ಹೆಚ್ಚಿಸಿದರು. ಗಿಲ್ 3 ಸಿಕ್ಸ್ ಮತ್ತು 2 ಬೌಂಡರಿ ನೆರವಿನಿಂದ 46 ರನ್ ಗಳಿಸಿದರೆ, ತ್ರಿಪಾಠಿ 2 ಸಿಕ್ಸ್ ಮತ್ತು 5 ಬೌಂಡರಿ ಮೂಲಕ 35 ರನ್ ಪೇರಿಸಿದರು.
ಕ್ರೀಸಿಗೆ ಇಳಿದ ಸೂರ್ಯಕುಮಾರ್ ಯಾದವ್ ರನ್ ರೇಟ್ ಹೆಚ್ಚಿಸಿದರು. ಕೇವಲ 45 ಎಸೆತಗಳಿಂದ ತನ್ನ ಮೂರನೇ ಟಿ20 ಶತಕ ಸಿಡಿಸಿ ಅಬ್ಬರಿಸಿದ 360 ಡಿಗ್ರಿ ಬ್ಯಾಟರ್, 51 ಎಸೆತಗಳನ್ನು ಎದುರಿಸಿ ಅಜೇಯ 112 ರನ್ ಗಳಿಸಿ ಲಂಕಾ ಬೌಲರ್ ಗಳ ಬೆವರಿಳಿಸಿದರು.
9 ಸಿಕ್ಸ್, 7 ಬೌಂಡರಿಗಳಿಂದ ಕೂಡಿದ ಅತ್ಯಾಕರ್ಷಕ ಇನ್ನಿಂಗ್ಸ್ ಮೂಲಕ ರಾಜಕೋಟ್ ನಲ್ಲಿ ರಾಜದರ್ಬಾರ ನಡೆಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸೂರ್ಯಕುಮಾರ್ 219.6 ಸ್ಟ್ರೈಕ್ ರೇಟ್ ನೊಂದಿಗೆ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡಿದರು.
ಕೇವಲ 9 ಎಸೆತಗಳನ್ನು ಎದುರಿಸಿದ ಅಕ್ಷರ್ ಪಟೇಲ್ 4 ಬೌಂಡರಿ ಮೂಲಕ ಅಜೇಯ 21 ರನ್ ಗಳಿಸಿ ಸೂರ್ಯಕುಮಾರ್ ಯಾದವ ಜತೆಗೆ ಜುಗಲ್ ಬಂದಿ ನಡೆಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು.
ಬೃಹತ್ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಶ್ರೀಲಂಕಾ, ಆರಂಭದಲ್ಲೇ ಅಬ್ಬರಿಸುತ್ತಿದ್ದ ನಿಸಂಕಾ ಮತ್ತು ಕುಸಾಲ್ ಮೆಂಡಿಸ್ ಜೋಡಿಯ ಉತ್ತಮ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು.
ಗೆಲುವಿನ ಆಸೆಯನ್ನು ಜೀವಂತವಾಗಿಟ್ಟ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಕ್ಷರ್ ಪಟೇಲ್ ತಮ್ಮ ಮೊದಲ ಓವರ್ ನಲ್ಲೇ ಯಶಸ್ಸನ್ನು ಕಂಡರು. ನಂತರ ನಡೆದದ್ದು ಶ್ರೀಲಂಕಾ ಆಟಗಾರರ ಪೆವಿಲಿಯನ್ ನಡಿಗೆ. ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದರೆ, ನಾಯಕ ಹಾರ್ದಿಕ್ ಪಾಂಡ್ಯಾ, ವೇಗಿ ಉಮ್ರಾನ್ ಮಲಿಕ್ ಮತ್ತು ಚಹಾಲ್ ತಲಾ 2 ವಿಕೆಟ್ ಪಡೆದರು.
ಅಂತಿಮವಾಗಿ 16.4 ಓವರ್ ಆಗುವಷ್ಟರಲ್ಲಿ 137 ರನ್ನಿಗೆ ಶ್ರೀಲಂಕಾ ಸರ್ವಪತನವಾಯಿತು. ಭಾರತ ತಂಡ 91 ರನ್ ಗಳ ಐತಿಹಾಸಿಕ ಗೆಲುವಿನ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ.