ಟೋಕಿಯೊ: ಟೋಕಿಯೋ ಯೊಯೊಗಿ ನ್ಯಾಶನಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಪ್ಯಾರಾಲಿಂಪಿಕ್ಸ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್.ಎಲ್4 ವಿಭಾಗದ ಫೈನಲ್ ನಲ್ಲಿ ಭಾರತದ ಖ್ಯಾತ ಪ್ಯಾರಾ ಬ್ಯಾಡ್ಮಿಂಟನ್ ತಾರೆ ಹಾಗೂ ಉತ್ತರ ಪ್ರದೇಶದ ನೊಯ್ಡಾ ಜಿಲ್ಲಾಧಿಕಾರಿ ನಮ್ಮದೇ ರಾಜ್ಯದವರಾಗಿರುವ ಸುಹಾಸ್ ಯತಿರಾಜ್ ರವರು ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ವಿಶ್ವದ ನಂಬರ್ 1 ಶ್ರೇಯಾಂಕದ ಫ್ರೆಂಚ್ ಆಟಗಾರ ಲ್ಯೂಕಸ್ ವಿರುದ್ಧ ಸುಹಾಸ್ 21-15, 17-21, 15-21 ಸೆಟ್ ಗಳಲ್ಲಿ ಪರಾಭವಗೊಂಡರೂ, ಈ ಪಂದ್ಯಾವಳಿಯುದ್ದಕ್ಕೂ ಸುಹಾಸ್ ತನ್ನ ಅತ್ಯುತ್ತಮ ಪ್ರದರ್ಶನದಿಂದ ಪ್ರೇಕ್ಷಕರ ಮನ ಗೆದ್ದರು. 1 ಗಂಟೆ 2 ನಿಮಿಷಗಳ ಕಾಲ ಸಾಗಿದ ಫೈನಲ್ ಪಂದ್ಯ ಹಲವಾರು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಸುಹಾಸ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆಯ ಮೂಲಕ ಅಭಿನಂದಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿನಂದನೆಗಳನ್ನು ಸಲ್ಲಿಸಿ, ಜಿಲ್ಲಾಧಿಕಾರಿಯಾಗಿಯೂ ಕರ್ತವ್ಯದ ಒತ್ತಡವನ್ನು ನಿಭಾಯಿಸಿ ಕ್ರೀಡೆಯಲ್ಲೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅವರ ಸಾಧನೆ ನಮಗೆಲ್ಲರಿಗೂ ಪ್ರೇರಣೆ ಎಂದು ಟ್ವೀಟ್ ಮಾಡಿದ್ದಾರೆ.
ಸುಹಾಸ್ ಲಾಲಿನಕೆರೆ ಯತಿರಾಜ್ ಅವರು ಜುಲೈ 2, 1983 ರಲ್ಲಿ ಕರ್ನಾಟಕದ ಹಾಸನದಲ್ಲಿ ಹುಟ್ಟಿದ್ದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹಾಸನ ಮತ್ತು ಶಿವಮೊಗ್ಗದಲ್ಲಿ ಪಡೆದು, ಸುರತ್ಕಲ್ ಎನ್.ಐ.ಟಿ.ಕೆಯಲ್ಲಿ ಕಂಪ್ಯೂಟರ್ ಸೈಯನ್ಸ್ ಇಂಜಿನಿಯರಿಂಗ್ ಪದವಿ ಪಡೆದರು. ಅವರು 2007 ಬ್ಯಾಚ್ ಐ.ಎ.ಎಸ್ ಅಧಿಕಾರಿ.