ಚೆನ್ನೈ, ಅ.8: (ಉಡುಪಿ ಬುಲೆಟಿನ್ ವರದಿ) ವಿಶ್ವಕಪ್ ಮೊದಲ ಪಂದ್ಯದಲ್ಲಿ ಭಾರತ ಶುಭಾರಂಭ ಮಾಡಿದೆ. ಭಾನುವಾರ ಇಲ್ಲಿಯ ಎಂ.ಎ. ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ 6 ವಿಕೆಟ್ ಗಳ ರೋಚಕ ಗೆಲುವನ್ನು ಸಾಧಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಬುಮ್ರಾ ದಾಳಿಗೆ ಆರಂಭಿಕ ಆಟಗಾರ ಮಿಶೆಲ್ ಮಾರ್ಷ್ ಖಾತೆ ತೆರೆಯದೆ ನಿರ್ಗಮಿಸಿದರು. ಎರಡನೆಯ ವಿಕೆಟಿಗೆ ಡೇವಿಡ್ ವಾರ್ನರ್ ಸ್ಟೀವ್ ಸ್ಮಿತ್ ಜೋಡಿ 69 ರನ್ ಜತೆಯಾಟ ನೀಡಿದರು. ವಾರ್ನರ್ 41 ರನ್ ಗಳಿಸಿದರೆ, ಸ್ಮಿತ್ 46 ರನ್ ಗಳಿಸಿದರು. ಆಸ್ಟ್ರೇಲಿಯಾ 49.3 ಓವರ್ ಗಳಲ್ಲಿ 199 ಕ್ಕೆ ಸರ್ವಪತನವಾಯಿತು. ಕಾಂಗರೂಗಳಿಗೆ ದೊಡ್ಡ ಮೊತ್ತ ಪೇರಿಸುವಲ್ಲಿ ಭಾರತದ ಬೌಲರ್ ಗಳು ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ರವೀಂದ್ರ ಜಡೇಜಾ ಶಿಸ್ತುಬದ್ಧ ದಾಳಿಯನ್ನು ಸಂಘಟಿಸಿ 3 ವಿಕೆಟ್ ಪಡೆದರೆ, ಬುಮ್ರಾ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.
ಅಲ್ಪ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತಕ್ಕೆ ಆಸ್ಟ್ರೇಲಿಯಾ ವೇಗಿಗಳು ಅರಂಭದಲ್ಲೇ ಕಡಿವಾಣ ಹಾಕಿದರು. ಆರಂಭದಲ್ಲಿ ಭಾರತ ತಂಡಕ್ಕೆ ಹೇಜಲ್ವುಡ್ ಮರ್ಮಾಘಾತ ನೀಡಿದರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ಇಶಾನ್ ಕಿಶನ್ ಸೊನ್ನೆ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಆಗಮಿಸಿದ ಶ್ರೇಯಸ್ ಐಯ್ಯರ್ ಕೂಡ ಸೊನ್ನೆಗೆ ಔಟಾದರು. 2 ರನ್ ಆಗುವಷ್ಟರಲ್ಲಿ ಭಾರತದ ಪ್ರಮುಖ 3 ವಿಕೆಟ್ ಕಬಳಿಸುವಲ್ಲಿ ಕಾಂಗರೂ ಪಡೆ ಯಶಸ್ಸು ಕಂಡಿತು.
ಗೆಲುವಿನ ಜತೆಯಾಟ: ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಜವಾಬ್ದಾರಿಯುತವಾಗಿ ಆಟವಾಡಿದರು. ಎಲ್ಲಾ ರೀತಿಯ ದಾಳಿಯನ್ನು ಮೆಟ್ಟಿನಿಂತ ಈ ಜೋಡಿ ಎಲ್ಲಿಯೂ ಗಡಿಬಿಡಿ ಮಾಡದೇ ಕೇವಲ್ ಸಿಂಗಲ್, ಡಬ್ಬಲ್ ಗಳಿಗೆ ಮಾತ್ರ ಆದ್ಯತೆ ನೀಡಿ ಅಪರೂಪಕ್ಕೊಮ್ಮೆ ಬೌಂಡರಿಯತ್ತ ಗಮನ ಹರಿಸಿ 4ನೇ ವಿಕೆಟ್ ಗೆ 165 ರನ್ ಜತೆಯಾಟದ ಮೂಲಕ ತಂಡವನ್ನು ಗೆಲುವಿನ ಹೊಸ್ತಿಲಿನಲ್ಲಿ ತಂದು ನಿಲ್ಲಿಸಿದರು.
ವಿರಾಟ್ ಕೊಹ್ಲಿ 85 ರನ್ ಗಳಿಸಿ ಔಟಾದರು. ಅತ್ಯುತ್ತಮವಾಗಿ ಆಡಿದ ಕೆ.ಎಲ್. ರಾಹುಲ್ ಅಜೇಯ 97 ರನ್ ಗಳಿಸಿದರು. ಗೆಲ್ಲಲು 5 ರನ್ ಇರುವಾಗ ಕಮಿನ್ಸ್ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ ರಾಹುಲ್ ಗೆಲುವಿನ ನಗೆ ಬೀರಿದರು. ಕೇವಲ 41.2 ಓವರ್ ಗಳಲ್ಲಿ ಭಾರತ ಗೆಲುವಿನ ದಡ ಸೇರಿತು.