ಬರ್ಮಿಂಗ್ಹ್ಯಾಮ್: ಇಂದು ನಡೆದ ಕಾಮನ್ವೆಲ್ತ್ ಗೇಮ್ಸ್ ನ ವೇಟ್ ಲಿಫ್ಟಿಂಗ್ನಲ್ಲಿ ಭಾರತದ ಜೆರೆಮಿ ಲಾಲ್ ರಿನುಂಗಾ ಅವರು ಚಿನ್ನದ ಪದಕ ಗೆದ್ದು ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. ಇದು ಭಾರತದ ಎರಡನೆಯ ಸ್ವರ್ಣ ಪದಕವಾಗಿದೆ. ತನ್ಮೂಲಕ ಭಾರತಕ್ಕೆ ಇಲ್ಲಿಯವರೆಗೆ ಸಿಕ್ಕಿದ 5 ಪದಕಗಳು ವೇಟ್ ಲಿಫ್ಟಿಂಗ್ನಲ್ಲಿ ಬಂದಿರುವುದು ವಿಶೇಷ.
ಜೆರೆಮಿ ಲಾಲ್ ರಿನುಂಗಾ ಪುರುಷರ 67 ಕೆಜಿ ವಿಭಾಗದಲ್ಲಿ ಒಟ್ಟು 300 ಕೆಜಿ ಭಾರ ಎತ್ತುವ ಮೂಲಕ ನೂತನ ಇತಿಹಾಸ ನಿರ್ಮಿಸಿದರು.
ಮಿಜೋರಾಂ ರಾಜ್ಯದ 19 ರ ಹರೆಯದ ಜೆರೆಮಿ ಲಾಲ್ ರಿನುಂಗಾ, ತನ್ನ ಮೊದಲ ಸ್ಯ್ನಾಚ್ ವಿಭಾಗದಲ್ಲಿ ಯಶಸ್ವಿಯಾಗಿ 136 ಕೆಜಿ ಭಾರ ಎತ್ತಿದ ಅವರು, ಎರಡನೆಯ ಪ್ರಯತ್ನದಲ್ಲಿ 140 ಕೆಜಿ ಎತ್ತಿ ನೂತನ ಕಾಮನ್ವೆಲ್ತ್ ಗೇಮ್ಸ್ ದಾಖಲೆ ನಿರ್ಮಿಸಿದರು.
ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 160 ಕೆಜಿಯನ್ನು ಎತ್ತಿ ಮತ್ತೊಂದು ದಾಖಲೆ ನಿರ್ಮಿಸಿ ಭಾರತಕ್ಕೆ ಎರಡನೆಯ ಸ್ವರ್ಣ ಪದಕ ನೀಡಿದರು.