ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಭಾರತ 113 ರನ್ ಗಳ ಐತಿಹಾಸಿಕ ಗೆಲುವನ್ನು ದಾಖಲಿಸಿ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 1-0 ಮುನ್ನಡೆ ಕಾಯ್ದುಕೊಂಡಿದೆ. ಇದು ಸೆಂಚೂರಿಯನ್ ನಲ್ಲಿ ಭಾರತದ ಮೊದಲ ಗೆಲುವಾಗಿದೆ.
ಐದನೇ ದಿನವಾದ ಇಂದು ಭಾರತದ ಬೌಲರ್ ಗಳ ಶಿಸ್ತುಬದ್ಧ ದಾಳಿಗೆ ದಕ್ಷಿಣ ಆಫ್ರಿಕಾ ಬಳಿ ಉತ್ತರವೇ ಇರಲಿಲ್ಲ. 305ರ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 191 ಕ್ಕೆ ಸರ್ವಪತನವಾಯಿತು. ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ 77 ರನ್ ಗಳಿಸಿದರು.
ಟಾಸ್ ಗೆದ್ದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರ ಆಕರ್ಷಕ ಶತಕ, ಮಾಯಂಕ್ ಅಗರ್ವಾಲ್ ಅವರ ಅರ್ಧಶತಕದ ನೆರವಿನಿಂದ 327 ರನ್ ಗಳಿಸಿತು. ಪಂದ್ಯದ ನಡುವೆ ಮಳೆಯ ಆಗಮನವಾದ ಕಾರಣ ಇಡೀ ದಿನದ ಪಂದ್ಯ ಮಳೆಗೆ ಆಹುತಿಯಾಯಿತು.
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 197 ರನ್ ಗಳಿಸಿದರೆ, ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲಿ 174 ರನ್ ಗಳಿಸಿತು.
ಮೊಹಮ್ಮದ್ ಶಮಿ ಎರಡು ಇನ್ನಿಂಗ್ಸ್ ಗಳಲ್ಲಿ ಒಟ್ಟು 8 ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ವಿದೇಶದ ಪಿಚ್ ನಲ್ಲಿ ಅನಾವರಣಗೊಳಿಸಿದರು.