ಕ್ಯಾಂಡಿ, ಜು.28: ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಭಾರತ 43 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ತನ್ಮೂಲಕ, ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನೂತನ ನಾಯಕ ಸೂರ್ಯಕುಮಾರ್ ಯಾದವ್ ಅವರ ನೇತೃತ್ವದಲ್ಲಿ ಭಾರತ ಶುಭಾರಂಭ ಮಾಡಿದೆ.
ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 213 ರನ್ ಗಳಿಸಿತು. ಪತಿರಾಣ 4 ವಿಕೆಟ್ ಪಡೆದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 21 ಎಸೆತಗಳನ್ನು ಎದುರಿಸಿ 40 ರನ್ ಗಳಿಸಿದರೆ, ಗಿಲ್ 16 ಎಸೆತಗಳಲ್ಲಿ 34 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ವೇಗದ 58 ರನ್ ಗಳಿಸಿದರು. ಅವರಿಗೆ ರಿಷಬ್ ಪಂತ್ ಸಾಥ್ ನೀಡಿದರು. ಪಂತ್ 49 ರನ್ ಗಳಿಸಿದರು.
ಉತ್ತರವಾಗಿ, ಶ್ರೀಲಂಕಾದ ಅಗ್ರ ಕ್ರಮಾಂಕವು 14 ನೇ ಓವರ್‌ವರೆಗೆ ಉತ್ತಮ ಸ್ಥಿತಿಯಲ್ಲಿ ಕಾಣಿಸಿಕೊಂಡಿತು. ಮೊದಲ ವಿಕೆಟ್ ಗೆ 84 ರನ್ ಜತೆಯಾಟ ನೀಡಿದ ಶ್ರೀಲಂಕಾ ಆರಂಭಿಕ ನಿಸ್ಸಂಕ ಮತ್ತು ಮೆಂಡಿಸ್ ಜೋಡಿಯನ್ನು ಬೇರ್ಪಡಿಸುವಲ್ಲಿ ಅರ್ಷದೀಪ್ ಸಿಂಗ್ ಸಫಲರಾದರು. ಪತ್ತುಮ್ ನಿಸ್ಸಂಕ ಕೇವಲ 48 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಒಳಗೊಂಡ ಅಬ್ಬರದ ಬ್ಯಾಟಿಂಗ್ ನಡೆಸಿ 79 ರನ್ ಮಾಡಿದರೆ, ಮೆಂಡಿಸ್ 45 ರನ್ ಗಳಿಸಿದರು. ಎರಡನೆಯ ವಿಕೆಟ್ ಪತನವಾದ ನಂತರ ಲಂಕೆಯ ಆಟಗಾರರ ಪೆವಿಲಿಯನ್ ಯಾತ್ರೆ ಸಾಗಿತು. ರಿಯಾನ್ ಪರಾಗ್ 1.2 ಓವರ್ ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರು. ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.