ಟೋಕಿಯೊ: ಇಂದು ನಡೆದ ಟೋಕಿಯೊ ಒಲಿಂಪಿಕ್ಸ್ ಪುರುಷರ ಹಾಕಿ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತ ಗೆಲುವನ್ನು ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ತನ್ಮೂಲಕ ನಾಲ್ಕು ದಶಕಗಳ ನಂತರ ಭಾರತ ಒಲಿಂಪಿಕ್ಸ್ ಹಾಕಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಇಂದು ನಡೆದ ರೋಚಕ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಮನ್ಪ್ರೀತ್ ಸಿಂಗ್ ಪಡೆ ಗ್ರೇಟ್ ಬ್ರಿಟನ್ ವಿರುದ್ಧ 3-1 ಗೋಲುಗಳಿಂದ ಗೆದ್ದು ಪದಕದ ಆಸೆಯನ್ನು ಜೀವಂತವಾಗಿರಿಸಿದೆ.
7ನೇ ನಿಮಿಷದಲ್ಲಿ ದಿಲ್ಪ್ರೀತ್ ಸಿಂಗ್ ಬಳಿಕ ಗುರ್ಜಂತ್ ಸಿಂಗ್ ಹಾಗೂ ಅಂತಿಮವಾಗಿ 57ನೇ ನಿಮಿಷದಲ್ಲಿ ಹಾರ್ದಿಕ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
1980 ರ ಮಾಸ್ಕೋ ಒಲಂಪಿಕ್ಸ್ ಚಿನ್ನದ ಪದಕ ಗಳಿಸಿದ ಬಳಿಕ, ಸರಿ ಸುಮಾರು 41 ವರ್ಷಗಳ ಬಳಿಕ ಭಾರತ ಸೆಮಿಫೈನಲ್ ತಲುಪಿದೆ. ಸೆಮಿಫೈನಲ್ ನಲ್ಲಿ ಭಾರತ, ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಜರ್ಮನಿ ತಂಡವನ್ನು ಎದುರಿಸಲಿದೆ.