ಕಾನ್ಪುರ: ನ್ಯೂಜಿಲೆಂಡ್ ಕೊನೆಯ ಕ್ಷಣದಲ್ಲಿ ಸೋಲಿನ ದವಡೆಯಿಂದ ಪಾರಾಗುವ ಮೂಲಕ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಗೊಂಡಿದೆ.
ಮೊದಲ ಟೆಸ್ಟ್ ಕೊನೆಯ ದಿನವಾದ ಇಂದು ಭಾರತದ ಬೌಲರ್ ಗಳು ನ್ಯೂಜಿಲೆಂಡ್ ನ ಎಂಟು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
147ಕ್ಕೆ 8ನೇ ವಿಕೆಟ್ ಬೀಳುವ ಮೂಲಕ ಬಹುತೇಕವಾಗಿ ಪಂದ್ಯ ಭಾರತದ ನಿಯಂತ್ರಣದಲ್ಲಿತ್ತಾದರೂ, ನ್ಯೂಜಿಲೆಂಡ್ ಬೌಲರ್ ರಚಿನ್ ರವೀಂದ್ರ ಬರೋಬ್ಬರಿ 91 ಎಸೆತಗಳನ್ನು ಎದುರಿಸಿ ಅಜೇಯ 18 ರನ್ ಗಳಿಸಿ ತಡೆಗೋಡೆಯಾಗಿ ನಿಲ್ಲುವ ಮೂಲಕ ಭಾರತದ ಜಯವನ್ನು ‘ಡ್ರಾ’ ಆಗಿ ಪರಿವರ್ತಿಸಿದರು.
ಗೆಲುವಿನ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆಟಗಾರರು, ಮೂರನೇ ವಿಕೆಟ್ ಬಿದ್ದ ನಂತರ ರಕ್ಷಣಾತ್ಮವಾಗಿ ಆಡಲು ಆರಂಭಿಸಿದರು.
ಆರಂಭಿಕ ಆಟಗಾರ ಟಾಮ್ ಲಾಥಮ್ 52 ರನ್ ಗಳಿಸಿದರು. ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ರವೀಂದ್ರ ಜಡೇಜಾ 4, ಅಶ್ವಿನ್ 3 ವಿಕೆಟ್ ಪಡೆದರು.
ಸ್ಕೋರ್ ವಿವರ: ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 345, ದ್ವಿತೀಯ ಇನ್ನಿಂಗ್ಸ್ ನಲ್ಲಿ 234/7, ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 296, ದ್ವಿತೀಯ ಇನ್ನಿಂಗ್ಸ್ ನಲ್ಲಿ 165/9
ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದ್ವಿತೀಯ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿ ಮಿಂಚಿದ ಶ್ರೇಯಸ್ ಐಯರ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.