ಮೆಲ್ಬರ್ನ್: (ಉಡುಪಿ ಬುಲೆಟಿನ್ ವರದಿ) ಇಂದು ನಡೆದ ಟಿ20 ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ 5 ವಿಕೆಟ್ ಗಳ ಐತಿಹಾಸಿಕ ಗೆಲುವನ್ನು ಸಾಧಿಸಿ ವಿಶ್ವಕಪ್ ಕಿರೀಟ ಧರಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ಪಾಕಿಸ್ತಾನವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಮೊದಲ ಎಸೆತವನ್ನೇ ನೋಬಾಲ್ ಎಸೆದ ಬೆನ್ ಸ್ಟೋಕ್ಸ್ ಮತ್ತೆ ಸುಧಾರಿಸಿಕೊಂಡರು. ನಾಯಕ ಬಾಬರ್ ಅಜಮ್ 32 ರನ್ ಗಳಿಸಿದರೆ, ಶಾನ್ ಮಸೂದ್ 38 ರನ್ ಗಳಿಸಿದರು. 20 ಓವರ್ ಗಳಲ್ಲಿ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಇಂಗ್ಲೆಂಡ್ ಗೆ ಸುಲಭ ಸವಾಲು ನೀಡಿತು. ಸ್ಯಾಮ್ ಕುರನ್ 3 ವಿಕೆಟ್ ಗಳಿಸಿದರು.
ಸುಲಭದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 45 ರನ್ ಗೆ 3 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆರಂಭಿಕ ಜೋಡಿ ಬಟ್ಲರ್ ಮತ್ತು ಹೇಲ್ಸ್ ಅವರನ್ನು ಬೇಗನೇ ಪೆವಿಲಿಯನ್ ಕಳುಹಿಸುವಲ್ಲಿ ಪಾಕ್ ಬೌಲರ್ ಗಳು ಯಶಸ್ವಿಯಾದರು.
ಆಲ್ ರೌಂಡರ್ ಬೆನ್ ಸ್ಟೋಕ್ಸ್ ಪಾಕಿಸ್ತಾನದ ದಾಳಿಯನ್ನು ಧೂಳೀಪಟ ಮಾಡಿ ವಿಜಯದ ರನ್ ಹೊಡೆದರು. ಬೆನ್ ಸ್ಟೋಕ್ಸ್ 5 ಬೌಂಡರಿ ಮತ್ತು ಒಂದು ಸಿಕ್ಸ್ ಮೂಲಕ ಅಜೇಯ 52 ರನ್ ಗಳಿಸಿದರು. ಒಂದು ವಿಕೆಟ್ ಪಡೆಯುವ ಮೂಲಕ ಬೌಲಿಂಗ್ ನಲ್ಲಿಯೂ ಬೆನ್ ಸ್ಟೋಕ್ಸ್ ಮಿಂಚಿದರು. ಒಂದು ಓವರ್ ಇರುವಾಗಲೇ ಇಂಗ್ಲೆಂಡ್ ಗೆಲುವಿನ ನಗೆಯನ್ನು ಬೀರಿತು. ರೌಫ್ ಎರಡು ವಿಕೆಟ್ ಪಡೆದರು.