Home ಸುದ್ಧಿಗಳು ಕ್ರೈಂ ಮೈಸೂರು: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

ಮೈಸೂರು: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

509
0

ಮೈಸೂರು: ನಗರದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಗುಂಪೊಂದು ಸಾಮೂಹಿಕ ಅತ್ಯಾಚಾರವೆಸಗಿ ಆಕೆಯ ಗೆಳೆಯನನ್ನು ಥಳಿಸಿದ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲು ಪ್ರದೇಶವಾದ ಲಲಿತಾದ್ರಿಪುರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಸಂತ್ರಸ್ತೆ ಹಾಗೂ ಆಕೆಯ ಸಹಪಾಠಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಮಂಗಳವಾರ ಸಂಜೆ 7 ಗಂಟೆಗೆ ವಿದ್ಯಾರ್ಥಿನಿ ಮತ್ತು ಆಕೆಯ ಸಹಪಾಠಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಪಾನಮತ್ತರಾಗಿದ್ದ ಗುಂಪೊಂದು ಅವರನ್ನು ಅಡ್ಡಗಟ್ಟಿ ಆಕೆಯ ಸ್ನೇಹಿತನನ್ನು ಧಳಿಸಿ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿ ಜೀವ ಬೆದರಿಕೆ ಹಾಕಿ ಆಕೆಯ ಮೇಲೆ ದೌರ್ಜನ್ಯ ಎಸೆಗಿದ್ದಾರೆ ಮತ್ತು ದುಷ್ಕೃತ್ಯ ಎಸಗಿದ ಗುಂಪಿನಲ್ಲಿ ಐವರು ಇದ್ದರು ಎಂದು ಸಂತ್ರಸ್ತೆಯು ಅಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಎಫ್.ಐ.ಆರ್ ದಾಖಲಿಸಿ ದುರುಳರಿಗಾಗಿ ಬಲೆ ಬೀಸಿದ್ದಾರೆ.

ಸ್ಥಳಕ್ಕೆ ಮೈಸೂರು ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಸಹಪಾಠಿಯ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸರಿಯಾದ ದಾರಿದೀಪದ ವ್ಯವಸ್ಥೆ ಇಲ್ಲದಿರುವುದು ಹಾಗೂ ಈ ಪ್ರದೇಶದಲ್ಲಿ ಜನಸಂಚಾರ ವಿರಳವಾಗಿದ್ದ ಕಾರಣ ಅತ್ಯಾಚಾರಿಗಳ ಗುರುತು ಸಿಗಲಿಲ್ಲ ಎನ್ನಲಾಗುತ್ತಿದೆ.

ಇನ್ನೊಂದು ಹೇಳಿಕೆಯ ಪ್ರಕಾರ ಮಂಗಳವಾರ ಸಂಜೆ 7.30 ಸುಮಾರಿಗೆ ಯುವಜೋಡಿ ಚಾಮುಂಡಿ ಬೆಟ್ಟದಿಂದ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಗುಂಪೊಂದು ಅಡ್ಡಗಟ್ಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಹಣ ನೀಡಲು ಜೋಡಿ ನಿರಾಕರಿಸಿದ ಕಾರಣ ಯುವಕನನ್ನು ಥಳಿಸಿ ಆತನ ಜೊತೆಗಿದ್ದವಳನ್ನು ಇಬ್ಬರು ಅತ್ಯಾಚಾರವೆಸಗಿದ್ದು ಉಳಿದವರು ಆಕೆಯ ಸಹಪಾಠಿಯನ್ನು ಆಕೆಯ ಸಹಾಯಕ್ಕೆ ಬಾರದಂತೆ ತಡೆದು ಹಲ್ಲೆ ಮಾಡಿದರು ಎನ್ನಲಾಗಿದೆ.

ಕಠಿಣ ಕ್ರಮ: ಸಿಎಂ
ನವದೆಹಲಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕ್ಷಿಪ್ರ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ವಿಶೇಷ ತಂಡ ರಚನೆ: ಗೃಹ ಸಚಿವ
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಇದೊಂದು ದುರದೃಷ್ಟಕರ ಘಟನೆ. ಕ್ಷಿಪ್ರ ರೀತಿಯಲ್ಲಿ ತನಿಖೆ ನಡೆಸಲು ಎಡಿಜಿಪಿ ಪ್ರತಾಪ್ ರೆಡ್ಡಿ ಸಹಿತ ಇತರೆ ಅಧಿಕಾರಿಗಳನ್ನು ಮೈಸೂರಿಗೆ ಕಳುಹಿಸಲಾಗಿದೆ. ಗುರುವಾರ ನಾನೂ ಮೈಸೂರಿಗೆ ತೆರಳಲಿದ್ದೇನೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.