ಕರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದ ನಂತರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಎರಡು ವಾರಗಳ ಲಾಕ್‌ಡೌನ್ ವಿಧಿಸಲಾಗಿದೆ. ಮಧ್ಯ ಮತ್ತು ಪೂರ್ವ ಉಪನಗರಗಳಲ್ಲಿ ವಾಸಿಸುವ ಸುಮಾರು ಒಂದು ದಶಲಕ್ಷಕ್ಕೂ ಹೆಚ್ಚು ಮಂದಿ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಡೆಲ್ಟಾ ರೂಪಾಂತರದ 80 ಕ್ಕೂ ಹೆಚ್ಚು ಪ್ರಕರಣಗಳು ಸಿಡ್ನಿಯಲ್ಲಿ ಕೆಲವು ದಿನಗಳ ಹಿಂದೆ ದೃಢಪಟ್ಟಿರುವ ಹಿನ್ನಲೆಯಲ್ಲಿ ಈ ಬಾರಿಯ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಿಡ್ನಿಯಲ್ಲಿ ಜುಲೈ 9 ರವರೆಗೆ ಎಲ್ಲರಿಗೂ ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ. ಡೆಲ್ಟಾ ವೈರಸ್ ಬಹಳ ಅಪಾಯಕಾರಿಯಾಗಿದ್ದ ಕಾರಣ ಕೇವಲ ಮೂರು ದಿನಗಳ ಲಾಕ್‌ಡೌನ್ ವಿಧಿಸಿದರೆ ಏನೂ ಪ್ರಯೋಜನವಾಗುವುದಿಲ್ಲ. ಅದಕ್ಕಾಗಿ ತಜ್ಞರ ಸಲಹೆಯ ಮೇರೆಗೆ ಎರಡು ವಾರಗಳ ಕಾಲ ಲಾಕ್‌ಡೌನ್ ವಿಧಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಆಸ್ಟೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಪ್ರೀಮಿಯರ್ ಗ್ಲಾಡಿಸ್ ಬೆರೆಜಿಕ್ಲಿಯನ್ ಹೇಳಿದ್ದಾರೆ.