ಟೋಕಿಯೋ: 11 ವರ್ಷಗಳ ಹಿಂದೆ ಸುನಾಮಿಯಿಂದ ಜರ್ಜರಿತವಾದ ಪ್ರದೇಶವಾದ ಜಪಾನ್‌ನ ಫುಕುಶಿಮಾ ಬಳಿ ಇಂದು 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಉತ್ತರ ಜಪಾನ್‌ನ ಫುಕುಶಿಮಾ ತೀರದಿಂದ ಸಮುದ್ರದ ಕೆಳಗೆ 60 ಕಿಲೋಮೀಟರ್ ಆಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ.
ಸುಮಾರು ಎರಡು ನಿಮಿಷಗಳಿಗಿಂತ ಹೆಚ್ಚಿನ ಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಅಲ್ಲಿಯ ಜನರು ತಿಳಿಸಿದ್ದಾರೆ. ಜಪಾನ್ ಹವಾಮಾನ ಸಂಸ್ಥೆಯು ಫುಕುಶಿಮಾ ಮತ್ತು ಮಿಯಾಗಿ ಪ್ರಾಂತ್ಯಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. 1 ಮೀಟರ್ ಎತ್ತರದಷ್ಟು ಅಲೆಗಳು ಅಪ್ಪಳಿಸಬಹುದೆಂದು ಎಚ್ಚರಿಸಿದೆ.
ಕಾಂಟೊ ಪ್ರದೇಶದಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಕಡಿತದ ವರದಿಗಳಿವೆ ಮತ್ತು ಹಲವಾರು ರೈಲು ಮಾರ್ಗಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.