ಮಲ್ಪೆ, ಸೆ.9: ಇಂದಿನ ಡಿಜಿಟಲ್ ಯುಗದಲ್ಲಿ ಕಲಿಕೆಗೆ ಹಲವಾರು ಅವಕಾಶಗಳಿವೆ. ಆದರೆ ತಂತ್ರಜ್ಞಾನದ ದುರ್ಬಳಕೆ ಕೂಡ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಸೂಕ್ತ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ಗಾಂವಕರ್ ಅಭಿಪ್ರಾಯಪಟ್ಟರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಐಕ್ಯೂಎಸಿ ಹಾಗೂ ಎಲ್ಲಾ ಪಿ.ಜಿ ವಿಭಾಗಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾದ ʼವಿಶ್ವ ಸಾಕ್ಷರತಾ ದಿನಾಚರಣೆʼ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ಹಾಗೂ ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ ಭಟ್ ಅವರು ಕಲಿಕೆಯಲ್ಲಿ ಔನತ್ಯ ಸಾಧಿಸಲು ತಂತ್ರಜ್ಞಾನದ ಸದ್ಭಳಕೆ ಅನಿವಾರ್ಯ ಎಂದರು. ಐಕ್ಯೂಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸಂದೇಶ್ ಕುಮಾರ್, ರಾಜಕುಮಾರ್ ಹಾಗೂ ವಿವಿಧ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು. ವಿವಿಧ ಸ್ನಾತಕೋತ್ತರ ವಿಭಾಗಗದ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.




By
ForthFocus™