Home ಅಂಕಣ ಹಕ್ಕಿಗಳ ಭಾಷೆಯಲ್ಲಿ ಮನುಷ್ಯರ ಸಂವಹನ

ಹಕ್ಕಿಗಳ ಭಾಷೆಯಲ್ಲಿ ಮನುಷ್ಯರ ಸಂವಹನ

519
0

ಆಧುನಿಕತೆಯ ಪ್ರಸ್ತುತ ಕಾಲಘಟ್ಟದಲ್ಲಿಯೂ ಇಂತಹ ಅಪರೂಪದ ಭಾಷೆಯನ್ನು ಉಪಯೋಗಿಸಿ ಅದರ ಉಳಿವಿಗಾಗಿ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿರುವ ಟರ್ಕಿಯ ಕುಸ್ಕೋಯ್ ಹಳ್ಳಿ ಜನರ ಭಗೀರಥ ಪ್ರಯತ್ನವನ್ನು ಮೆಚ್ಚಲೇಬೇಕು.

ಧುನಿಕತೆಯ ಪ್ರಸ್ತುತ ಕಾಲಘಟ್ಟದಲ್ಲಿಯೂ ಇಂತಹ ಅಪರೂಪದ ಭಾಷೆಯನ್ನು ಉಪಯೋಗಿಸಿ ಅದರ ಉಳಿವಿಗಾಗಿ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿರುವ ಟರ್ಕಿಯ ಕುಸ್ಕೋಯ್ ಹಳ್ಳಿ ಜನರ ಭಗೀರಥ ಪ್ರಯತ್ನವನ್ನು ಮೆಚ್ಚಲೇಬೇಕು.

ಸೀಟಿ ಅಥವಾ ಶಿಳ್ಳೆಯ ಮೂಲಕ ಏರು ಧಾಟಿಯಲ್ಲಿ ಹಕ್ಕಿಗಳ ಚಿಲಿಪಿಲಿ ನಾದವನ್ನು ಹೋಲುವ ಈ ಅಪರೂಪದ ಭಾಷೆಯನ್ನು ಉತ್ತರ ಟರ್ಕಿಯ ಜನರು ಸಲೀಸಾಗಿ ತಮ್ಮ ದೈನಂದಿನ ಸಂವಹನಕ್ಕಾಗಿ ಬಳಸುತ್ತಾರೆ. ಇದೇನು? ಹಕ್ಕಿಗಳ ಭಾಷೆಯಲ್ಲಿ ವ್ಯಕ್ತಿಗಳು ಮಾತನಾಡುವುದು ಎಂದು ನಿಮ್ಮಲ್ಲಿ ಒಂದು ಕ್ಷಣ ಪ್ರಶ್ನಾರ್ಥಕ ಮೂಡುವುದು ಸಹಜ. ಟರ್ಕಿಯ ಗಿರೆಸುನ್ ಪ್ರಾಂತ್ಯದ ಕನಾಸ್ಕೀ ಜಿಲ್ಲೆಯ ಕುಸ್ಕೋಯ್ ಎಂಬ ಹಳ್ಳಿಯು ಒರಟಾದ ಏರುಪೇರುಗಳುಳ್ಳ ಭೂಪ್ರದೇಶದಿಂದ ಕೂಡಿದೆ. ನೀವೇನಾದರೂ ಇಲ್ಲಿಗೆ ಭೇಟಿ ನೀಡಿದರೆ ಸಾವಿರಾರು ಹಕ್ಕಿಗಳು ಇಲ್ಲಿವೆ ಅಂತ ಬೇಸ್ತು ಬೀಳುವ ಪರಿಸ್ಥಿತಿ ಉದ್ಭವಿಸಬಹುದು.

ಇಲ್ಲಿ ವಾಸಿಸುವ ಸುಮಾರು ಹತ್ತು ಸಾವಿರ ಮಂದಿ ಬರ್ಡ್ ಲ್ಯಾಂಗ್ವೇಜ್ ಎಂದು ಕರೆಯಲ್ಪಡುವ ಈ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಇವರು ಹೊರಡಿಸುವ ಸದ್ದುಗಳು ಅಪ್ಪಟ ಹಕ್ಕಿಗಳ ಶೈಲಿಯನ್ನೇ ಹೋಲುತ್ತದೆ. ತುಟಿ, ಹಲ್ಲು, ನಾಲಗೆ, ಗಲ್ಲ ಮತ್ತು ಬೆರಳಿನ ಸಹಾಯದಿಂದ ಕುಸ್ಕೋಯ್ ಹಳ್ಳಿಗರು ಹೊರಡಿಸುವ ಇಂಪಾದ ಶಬ್ಧವನ್ನು ಆಲಿಸುವುದೇ ರೋಮಾಂಚಕಾರಿ ಅನುಭವ. ಅಲ್ಲಿಯ ಭೌಗೋಳಿಕ ಸಂಚರಚೆನೆಯಿಂದ ಈ ಭಾಷೆಯನ್ನು ಬಳಸುವವರು ಪ್ರತಿನಿತ್ಯ ಪರಸ್ಪರ ಭೇಟಿಯಾಗುವುದು ಕಡಿಮೆ. ಏರುಪೇರಾದ ಬೆಟ್ಟಗುಡ್ಡಗಳು, ಕಣಿವೆಗಳನ್ನೊಳಗೊಂಡ ಈ ಭೂಪ್ರದೇಶದಲ್ಲಿ ಜನರು ತಮ್ಮ ಇರುವಿಕೆಯನ್ನು ಗೊತ್ತುಪಡಿಸುವ ಸಲುವಾಗಿ ತುರ್ತು ಸಂದೇಶವನ್ನು ರವಾನಿಸಲು, ಉಭಯ ಕುಶಲೋಪಚರಿ, ಶುಭಾಶಯಗಳನ್ನು ವಿನಿಮಯ ಮಾಡಲು ಹಕ್ಕಿಗಳ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಈ ಅಪರೂಪದ ಭಾಷೆಯನ್ನು ಸಂರಕ್ಷಿಸುವ ಸಲುವಾಗಿ ಯುನೆಸ್ಕೋ ಲಿಸ್ಟ್ ಆಫ್ ಇನ್ ಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಲಾಗಿದೆ.

ಭಾಷೆ ಸಾಗಿ ಬಂದ ದಾರಿ:

ಸುಮಾರು 500 ವರ್ಷಗಳ ಹಿಂದೆ ಒಟ್ಟೋಮನ್ ಸಾಮ್ರಾಜ್ಯದ ಅವಧಿಯಲ್ಲಿ ಬೆಳಕಿಗೆ ಬಂದ ಈ ಅಪರೂಪದ ಭಾಷೆಯು ಕಾಲಕ್ರಮೇಣವಾಗಿ ಬ್ಲಾಕ್ ಸೀ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿತು. ಟ್ರಾಬ್ಜೋನ್, ರೈಜ್, ಓರ್ಡು, ಆರ್ಟ್ವಿನ್, ಬೇಬರ್ಟ್ ಕಣಿವೆ ಪ್ರದೇಶಗಳಲ್ಲಿ ಬಳಸಲ್ಪಡುತ್ತಿದ್ದ ಈ ಹಕ್ಕಿ ಭಾಷೆಯು ಬಳಿಕ ಆ ಪ್ರದೇಶಗಳಿಂದ ನಶಿಸಿ ಹೋಗಿ ಪ್ರಸ್ತುತ ಕೇವಲ ಟರ್ಕಿಯ ಗಿರೆಸುನ್ ಪ್ರಾಂತ್ಯದ ಕನಾಕ್ಸೀ ಜಿಲ್ಲೆಯ ಕುಸ್ಕೋಯ್ ಎಂಬ ಹಳ್ಳಿಯಲ್ಲಿ ಮಾತ್ರ ಚಾಲ್ತಿಯಲ್ಲಿದೆ. ಹಲವಾರು ಶತಮಾನಗಳಿಂದ ಈ ಭಾಷೆಯನ್ನು ಅಲ್ಲಿಯ ಹಿರಿಯರು ತಮ್ಮವರಿಗೆ ಕಲಿಸಿಕೊಟ್ಟರು.

ನಾಳೆ ನಮ್ಮ ಜೊತೆ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಾ? ವಾತಾವರಣ ಚೆನ್ನಾಗಿದೆಯಲ್ಲವೇ? ಇತ್ಯಾದಿಗಳನ್ನು ಹಕ್ಕಿಗಳ ಕೂಗಿನ ಶೈಲಿಯಲ್ಲಿ ವೈವಿಧ್ಯಮಯ ಶಿಳ್ಳೆ ಹಾಗೂ ಸೀಟಿಯ ಮೂಲಕ ಸಂವಹನ ನಡೆಸುವ ಇವರು ಈ ಭಾಷೆಯನ್ನು ಸಲೀಸಾಗಿ ಬಳಸುವ ಕೌಶಲಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇಂತಹ ಅಪರೂಪದ ಭಾಷೆಯಲ್ಲಿ ಸಂವಹನ ನಡೆಸುವ ಜಗತ್ತಿನ ಏಕೈಕ ಹಳ್ಳಿ ಅಂತ ದಾಖಲೆಯ ಪುಟಗಳನ್ನು ಈ ಹಳ್ಳಿಯು ಸೇರಿದೆ.

ಹಕ್ಕಿ ಭಾಷೆಯ ಮೇಲೆ ಮೊಬೈಲ್ ಕೊಡಲಿ ಏಟು?

ಮೊಬೈಲ್ ಫೋನ್ ತಂತ್ರಜ್ಞಾನ ಮೊಳಕೆಯೊಡೆದ ಬಳಿಕ ಗುಬ್ಬಚ್ಚಿಯ ಸಂತತಿಯು ಯಾವ ರೀತಿ ಕಡಿಮೆಯಾಗಲು ಆರಂಭಿಸಿತ್ತೋ ಅದೇ ರೀತಿಯಲ್ಲಿ ಈ ಭಾಷೆಯ ಮೇಲೆಯೂ ಮೊಬೈಲ್ ತೂಗು ಕತ್ತಿಯಾಗಿ ಪರಿಣಮಿಸಿದೆ. ಹೇಗೆ ಅಂತ ಪ್ರಶ್ನಿಸಿದರೆ, ಉತ್ತರ ಇಲ್ಲಿದೆ ನೋಡಿ. ಒರಟಾದ, ದೂರದ ಪ್ರದೇಶಗಳಲ್ಲಿ (ಕಣಿವೆಯ ಎರಡೂ ಬದಿಯಲ್ಲಿ ನಿಂತು) ಸಂವಹನ ನಡೆಸಲು ಅವರಿಗೆ ಈ ಭಾಷೆಯು ಬಹಳ ಸಹಕಾರಿಯಾಗುತ್ತಿತ್ತು. ಆದರೆ ಮೊಬೈಲ್ ಫೋನ್ ಪ್ರವೇಶಿಸಿದ ಬಳಿಕ ಈ ಹಳ್ಳಿಯ ಯುವಜನರು ಈ ಭಾಷೆಯನ್ನು ಕಷ್ಟಪಟ್ಟು ಕಲಿಯುವುದನ್ನೇ ಬಿಟ್ಟಿರುವುದು ಆತಂಕಕಾರಿಯಾದ ಬೆಳವಣಿಗೆ ಎಂದು ಇಲ್ಲಿಯ ಹಿರಿಯರು ಬೇಸರ ವ್ಯಕ್ತಪಡಿಸುತ್ತಾರೆ. ದೂರದಲ್ಲಿರುವವರ ಜೊತೆಗೆ ಹಕ್ಕಿಯ ಭಾಷೆಯ ಮೂಲಕ ಸಂವಹನ ನಡೆಸುವ ಬದಲು ಅಂದರೆ ಶಿಳ್ಳೆ ಅಥವಾ ಸೀಟಿಯ ಸಹಾಯದಿಂದ ಮಾತನಾಡುವ ಬದಲು ಮೊಬೈಲ್ ಫೋನ್ ಮೂಲಕವೇ ಮಾತನಾಡುವ ಮನಸ್ಥಿತಿಯನ್ನು ಯುವಜನರು ಬೆಳೆಸಿಕೊಂಡಿದ್ದಾರೆ. ಇದರಿಂದ ಅಳಿವೆಯ ಅಂಚಿನಲ್ಲಿರುವ ಈ ಅಪರೂಪದ ಭಾಷೆಯು ನಶಿಸಿ ಹೋಗುವ ಭೀತಿಯಲ್ಲಿದೆ.

ಈ ಭಾಷೆಯ ಮೇಲೆ ಪಾಂಡಿತ್ಯವನ್ನು ಹೊಂದಿರುವವರಿಗೆ ಈಗಾಗಲೇ ವಯಸ್ಸಾಗಿರುವುದರಿಂದ ಈ ಭಾಷೆಯನ್ನು ಉಪಯೋಗಿಸುವ ಸಾಮರ್ಥ್ಯವನ್ನು ಕ್ರಮೇಣವಾಗಿ ಅವರು ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ಫೋನುಗಳ ಆಗಮನದ ಮೊದಲು ಹಕ್ಕಿ ಭಾಷೆಯಲ್ಲಿಯೇ ಕಣಿವೆಯ ಒಂದು ಮನೆಯಿಂದ ದೂರದಲ್ಲಿರುವ ಇನ್ನೊಂದು ಮನೆಗೆ ಸಂಪರ್ಕವನ್ನು ಇಟ್ಟುಕೊಳ್ಳುತ್ತಿದ್ದರು. ಶಿಳ್ಳೆಯ ಮೂಲಕ ರವಾನಿಸಲ್ಪಡುತ್ತಿದ್ದ ಸಂದೇಶಗಳನ್ನು ಮೊಬೈಲ್ ಟೆಕ್ಸ್ಟ್ ಮೆಸೇಜುಗಳು ಇಂದು ಆಕ್ರಮಿಸಿವೆ.

ನಶಿಸುತ್ತಿರುವ ಈ ಭಾಷೆಯ ಉಳಿವಿಗಾಗಿ ಮುಂದಿನ ಪೀಳಿಗೆಗೆ ಕಲಿಸುವ ಕಾರ್ಯಗಳು ಟರ್ಕಿಯಲ್ಲಿ ಆರಂಭವಾಗಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಇದಕ್ಕೆ ಅನುಕೂಲವಾಗುವಂತಹ ಶಬ್ಧಕೋಶವನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಭಾಷೆಯ ಉಳಿವಿಗಾಗಿ ಮತ್ತು ಯುವಜನರನ್ನು ಆಕರ್ಷಿಸುವ ಉದ್ದೇಶದಿಂದ ಈ ಹಳ್ಳಿಯಲ್ಲಿ ಪ್ರತಿವರ್ಷವೂ ಬರ್ಡ್ ಲಾಂಗ್ವೇಜ್ ಫೆಸ್ಟಿವಲ್ ಎಂಬ ವಿನೂತನ ಆಚರಣೆಯನ್ನು ಆಯೋಜಿಸುವ ಮೂಲಕ ತಮ್ಮ ಭಾಷೆಯ ಇತಿಹಾಸ, ಅಗತ್ಯತೆ, ಅನಿವಾರ್ಯತೆ, ಪ್ರಾಮುಖ್ಯತೆ ಮತ್ತು ರಕ್ಷಣೆಯ ಬಗ್ಗೆ ಬೆಳಕು ಚೆಲ್ಲುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆಧುನಿಕತೆಯ ಪ್ರಸ್ತುತ ಕಾಲಘಟ್ಟದಲ್ಲಿಯೂ ಇಂತಹ ಅಪರೂಪದ ಭಾಷೆಯನ್ನು ಉಪಯೋಗಿಸಿ ಅದರ ಉಳಿವಿಗಾಗಿ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿರುವ ಟರ್ಕಿಯ ಕುಸ್ಕೋಯ್ ಹಳ್ಳಿ ಜನರ ಭಗೀರಥ ಪ್ರಯತ್ನವನ್ನು ಮೆಚ್ಚಲೇಬೇಕು.

-ಗಣೇಶ್ ಪ್ರಸಾದ್ ಜಿ. ನಾಯಕ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.