Home ಅಂಕಣ ಇತಿಹಾಸ ಪ್ರಸಿದ್ಧ ಕುಂಜಾರುಗಿರಿ

ಇತಿಹಾಸ ಪ್ರಸಿದ್ಧ ಕುಂಜಾರುಗಿರಿ

577
1

ಕುರ್ಕಾಲು ಗ್ರಾಮಕ್ಕೆ ಸೇರುವ ಕುಂಜಾರು ಜಿಲ್ಲಾ ಕೇಂದ್ರವಾದ ಉಡುಪಿಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಮಧ್ವಚಾರ್ಯರು ಜನಿಸಿದ ಪಾಜಕ ಕ್ಷೇತ್ರವು ಕುಂಜಾರುಗಿರಿಯಿಂದ 2 ಕಿ.ಮೀ‌ ಪೂರ್ವಕ್ಕೆ ಇದ್ದು, ಬಾಲ್ಯದಲ್ಲಿ ಕುಂಜಾರುಗಿರಿಯು ಮಧ್ವರ ಸಾಹಸಮಯ ಕ್ರೀಡಾಂಗಣವಾಗಿತ್ತು. ಇವರ ಕಾಲದಲ್ಲಿ ಕುಂಜಾರುಗಿರಿಗೆ “ದುರ್ಗಾ ಬೆಟ್ಟ”, “ವಿಮಾನಗಿರಿ” ಎಂಬ ಪ್ರಾಚೀನ ಹೆಸರುಗಳಿದ್ದವು. ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಪಟ್ಟಂತೆ ಕುಂಜಾರುಗಿರಿಯ ಬಾಣತೀರ್ಥದಲ್ಲಿ ನೂತನ‌ ಶಿಲಾಯುಗದ ಕಲ್ಲಿನ‌ ಕೊಡಲಿ ಹಾಗೂ ಬೃಹತ್ ಶಿಲಾಯುಗ ಸಮಾಧಿಗಳು ಪತ್ತೆಯಾಗಿದ್ದು, ಈ ನೆಲೆಯು ಸುಮಾರು 6 ಸಾವಿರ ವರ್ಷಗಳ ಪ್ರಾಚೀನತೆಯನ್ನು‌ ಹೊಂದಿತ್ತು‌‌ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಶ್ರೀ ದುರ್ಗಾದೇವಿ ದೇವಸ್ಥಾನ: ದುರ್ಗಾದೇವಿ ದೇವಾಲಯವು ಬೆಟ್ಟದ ಮೇಲಿದ್ದು, ಇಲ್ಲಿಗೆ ಹೋಗಲು ನಾಲ್ಕು ಬದಿಗಳಲ್ಲು ದಾರಿಗಳಿವೆ. ದಕ್ಷಿಣ ಭಾಗದಲ್ಲಿ ಬಂಡೆಯನ್ನು‌ ಕಡಿದು ಸುಮಾರು 257 ಮೆಟ್ಟಿಲುಗಳನ್ನು ಮಾಡಲಾಗಿದೆ. ದಂತಕಥೆಯ ಪ್ರಕಾರ ಕುಂಜಾರುಗಿರಿಯ ಮಹಿಷಮರ್ಧಿನಿ ದುರ್ಗೆಯು ಪರಶುರಾಮನಿಂದ ಪ್ರತಿಷ್ಠೆಗೊಂಡು ಪೂಜಿಸಲ್ಪಟ್ಟಿರುವಳು. ಹಾಗೆಯೇ ಬೆಟ್ಟದ ಪೂರ್ವ ದಿಕ್ಕಿನಲ್ಲಿರುವ ಪರಶು ತೀರ್ಥ, ಪಶ್ಚಿಮ ದಿಕ್ಕಿನಲ್ಲಿರುವ ಗದಾ ತೀರ್ಥ, ಉತ್ತರದಲ್ಲಿರುವ ಬಾಣ ತೀರ್ಥ ಮತ್ತು ದಕ್ಷಿಣದಲ್ಲಿರುವ ಧನುಸ್ ತೀರ್ಥಗಳು ಪರಶುರಾಮನ‌ ಸೃಷ್ಟಿ ಎಂಬ ನಂಬಿಕೆ‌ ಇದೆ.

ಪೂರ್ವಾಭಿಮುಖವಾಗಿ ನಿರ್ಮಾಣವಾಗಿರುವ ದೇವಾಲಯವು ಗರ್ಭಗೃಹ, ತೀರ್ಥ ಮಂಟಪ, ಪ್ರಾಕಾರ ಮಂಟಪ, ಚಂದ್ರಶಾಲೆ, ಬಲಿಪೀಠ ಹಾಗೂ ಧ್ವಜಸ್ತಂಭವನ್ನು ಒಳಗೊಂಡಿದೆ. ಗರ್ಭಗೃಹದ ಅಧಿಷ್ಠಾನವು ಎತ್ತರವಾಗಿದ್ದು, ಗರ್ಭಗೃಹದ ಒಳಗೆ ಪಾಣಿಪೀಠದ ಮೇಲೆ ಚತುರ್ಭುಜಧಾರಿ ದೇವಿಯ ವಿಗ್ರಹವಿದೆ. ಕಣಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಪಾಣಿಪೀಠದ ಮೇಲೆ ದೇವಿಯು ಕಮಲ ಪೀಠದಲ್ಲಿ ನಿಂತಿದ್ದು ಮೇಲಿನ‌ ಕೈಗಳಲ್ಲಿ ಶಂಖ-ಚಕ್ರ ಹಾಗೂ ಕೆಳಗಿನ ಕೈಗಳಲ್ಲಿ ತ್ರಿಶೂಲ ಮತ್ತು ಬಿಲ್ಲುಗಳಿವೆ. ಬಲಗಾಲಿನ ಬಳಿ ಮಹಿಷನ ಶಿರವಿದ್ದು, ಆತನನ್ನು ಶೂಲದಿಂದ ಇರಿಯುವಂತೆ ಕೆತ್ತಲಾಗಿದೆ. ಶಿಲಾ ಪ್ರಭಾವಳಿ‌ ಮತ್ತು ಕಿರೀಟಧಾರಿಯಾದ ಈ ವಿಗ್ರಹವು ಸುಮಾರು 10 -11 ನೇ ಶತಮಾನಕ್ಕೆ ಸೇರಿದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಕುಂಜಾರುಗಿರಿಯ ದೇವಿಗೆ ಗಿರಿ ದುರ್ಗೆ (ಗಿರಿಯ ಮೇಲಿರುವ ಕಾರಣ), ವನದುರ್ಗೆ (ಸುತ್ತ ಹಸಿರು ವನ‌ವಿರುವ ಕಾರಣ) ಮತ್ತು ಮಹಿಷಮರ್ದಿನಿ (ಮಹಿಷನನ್ನು ಶೂಲದಿಂದ ಸಂಹಾರ ಮಾಡಿರುವುದರಿಂದ) ಎಂಬ ಹೆಸರುಗಳಿವೆ. ದೇವಾಲಯದ ಒಳ ಪ್ರಾಕಾರ ಮಂಟಪದಲ್ಲಿ ಮೂರು ಅತೀ‌ ಪ್ರಾಚೀನ ಶಿಲಾ ವಿಗ್ರಹಗಳಿದ್ದು, ಅದರಲ್ಲಿ ಒಂದು‌ ಅಪರೂಪದ ಲಜ್ಜಾ ಗೌರಿ; ಇನ್ನೊಂದು ಮಹಿಷಮರ್ದಿನಿಯ ಭಿನ್ನ ವಿಗ್ರಹ. ಒಳ ಪ್ರಾಕಾರದ ಪ್ರದಕ್ಷಿಣಾ ‌ಪಥದಲ್ಲಿ ಇನ್ನೊಂದು ಸ್ತ್ರೀ ವಿಗ್ರಹವಿದ್ದು, ಸ್ಥಳೀಯವಾಗಿ “ನಿರ್ಮಾಲ್ಯ ದೇವತೆ ಮುಂಡಿನಿ” ಎಂದು‌ ಕರೆದರೂ ಪ್ರತಿಮಾ ಲಕ್ಷಣದ ಆಧಾರದ ಮೇಲೆ ಇದು ಲಜ್ಜಾ ಗೌರಿಯ ವಿಗ್ರಹವೆಂದು ಹೇಳಬಹುದು. ಈ‌ ಶಿಲ್ಪಗಳ ಕಾಲಮಾನವು 5-6 ನೇ ಶತಮಾನಕ್ಕೆ ಸೇರಿರುವುದರಿಂದ ದೇವಾಲಯದ ಪ್ರಾಚೀನತೆ ಈ ಶಿಲ್ಪಗಳ ಕಾಲಕ್ಕೆ ಹೋಗಬಹುದು. ಸುಮಾರು 10-11 ನೇ ಶತಮಾನದಲ್ಲಿ ದೇವಾಲಯವು‌ ಜೀರ್ಣೋದ್ಧಾರಗೊಂಡು ಮೂಲ ವಿಗ್ರಹದಲ್ಲಿ ಭಿನ್ನ ಕಂಡು ಬಂದಾಗ ಈಗಿನ‌ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ದೇವಾಲಯದಿಂದ ಪೂರ್ವ ದಿಕ್ಕಿನಲ್ಲಿ ಒಂದು‌ ಗುಹೆ ಇದ್ದು, ‌ಇದನ್ನು‌ “ಪರಶುರಾಮನ‌ ಗುಹೆ” ಎಂದು ಕರೆಯಲಾಗುತ್ತದೆ.

ಇತ್ತೀಚಿಗೆ ಜಗದ್ಗುರು ಶ್ರೀ ಮಧ್ವಾಚಾರ್ಯರ 32 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಬೆಟ್ಟದ ಕೆಳಭಾಗದಲ್ಲಿ ನಿರ್ಮಿಸಲಾಗಿದೆ. ಇದೊಂದು ಬೃಹತ್ ಮಾಗಣೆಯ ದೇವಸ್ಥಾನವಾಗಿದ್ದು, ಉಡುಪಿ ಕೃಷ್ಣನಿಗೂ ಈ ದೇವಿಗೂ ವಿಶಿಷ್ಟವಾದ ನಂಟು ಇದೆ. ಪರ್ಯಾಯ ಪೀಠವನ್ನೆರುವ ಶ್ರೀಪಾದರು ಪೀಠಾರೋಹಣಕ್ಕೆ ಮೊದಲು ಈ‌ ದೇವಿಯನ್ನು ಸಂದರ್ಶಿಸಿ ಪೂಜಿಸಬೇಕೆಂಬ ಸಂಪ್ರದಾಯವಿದೆ. ಕುಂಜಾರುಗಿರಿ‌ ಪ್ರದೇಶವು ಪ್ರಾಗೈತಿಹಾಸಿಕ ಕಾಲದಿಂದಲೂ‌ ಜನಯೋಗ್ಯ ನೆಲೆಯಾಗಿದ್ದು, ಪ್ರಾಚೀನ ದೇವಾಲಯಗಳು ಹಾಗೂ ಜಗದ್ಗುರು ಶ್ರೀ ಮಧ್ವಾಚಾರ್ಯರ ನೆಲೆಯಾಗಿ ಇಂದಿಗೂ‌ ಕೂಡ ತನ್ನ ಪ್ರಾಚೀನ‌ ಸಂಪ್ರದಾಯವನ್ನು‌ ಉಳಿಸಿ, ಬೆಳೆಸಿಕೊಂಡು ಜನಮನ್ನಣೆಯನ್ನು ಪಡೆದಿರುತ್ತದೆ.

-ಅರುಣ್ ಆರ್
ಅಂತಿಮ ಬಿ.ಎ. ವಿದ್ಯಾರ್ಥಿ, ಎಂ.ಎಸ್.ಆರ್.ಎಸ್ ಕಾಲೇಜು, ಶಿರ್ವ

1 COMMENT

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.