ಐದನೇ ತರಗತಿಯಲ್ಲಿ ಓದುತ್ತಿದ್ದ ರಾಹುಲ್ ಇತ್ತೀಚಿನ ದಿನಗಳಲ್ಲಿ ಕಲಿಕೆಯತ್ತ ಅನಾಸಕ್ತಿ ತೋರಿಸುತ್ತಿದ್ದ. ತರಗತಿಯಲ್ಲಿ ತೂಕಡಿಕೆ, ಪಾಠದ ಮೇಲೆ ಗಮನ ಕೊರತೆ ಹಾಗೂ ಪಾಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಇಲ್ಲದಿರುವುದು ಎಲ್ಲ ವಿಷಯ ಶಿಕ್ಷಕರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ತರಗತಿ ಶಿಕ್ಷಕರು ರಾಹುಲ್‌ಗೆ ಬುದ್ಧಿವಾದ ಹೇಳಿ, ನಡವಳಿಕೆಯಲ್ಲಿ ಬದಲಾವಣೆ ತರಬೇಕೆಂದು ಸೂಚಿಸಿದರು. ಪೋಷಕರನ್ನು ಕರೆಸಿ ಮಾತನಾಡಿಸಲಾಯಿತು. ಆದರೂ ಈ ಬದಲಾವಣೆಗೆ ಸ್ಪಷ್ಟವಾದ ಕಾರಣ ಪತ್ತೆಯಾಗಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದಲೇ ರಾಹುಲ್‌ನ ನಡವಳಿಕೆಯಲ್ಲಿ ಸ್ಪಷ್ಟವಾದ ತೀವ್ರ ಬದಲಾವಣೆ ಕಂಡುಬರುತ್ತಿರುವುದು ಶಿಕ್ಷಕರು ಹಾಗೂ ಕುಟುಂಬದವರ ಗಮನಕ್ಕೂ ಬಂದಿತ್ತು. ಶಿಕ್ಷಕರ ಸಲಹೆ ಮೇರೆಗೆ, ಅಷ್ಟೊಂದು ಒಲವಿಲ್ಲದ ಮನಸ್ಸಿನಿಂದಲೇ ರಾಹುಲ್‌ನ ತಾಯಿ ಮಗುವನ್ನು ಆಪ್ತ ಸಮಾಲೋಚನೆಗಾಗಿ ಆಸ್ಪತ್ರೆಗೆ ಕರೆತಂದರು. ಸಮಾಲೋಚಕರೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ, ರಾಹುಲ್ ನಿಧಾನವಾಗಿ ತನ್ನೊಳಗೆ ಮೌನವಾಗಿ ಸಂಗ್ರಹವಾಗಿದ್ದ ನೋವನ್ನು ಹೊರಹಾಕಲು ಆರಂಭಿಸಿದ. ಕಳೆದ ಎರಡು ವರ್ಷಗಳಿಂದ ತಂದೆಯ ಮದ್ಯವ್ಯಸನ ತೀವ್ರಗೊಂಡಿತ್ತು. ಸಮಾಜದಲ್ಲಿ ತಂದೆ ಒಳ್ಳೆಯ ಉದ್ಯೋಗ ಹಾಗೂ ಘನತೆ ಹೊಂದಿರುವ ವ್ಯಕ್ತಿಯಾಗಿರುವುದರಿಂದ, ಈ ವಿಷಯವನ್ನು ಯಾರೊಂದಿಗೂ ಚರ್ಚಿಸಬಾರದೆಂದು ತಾಯಿ ತಮ್ಮ ಮನಸ್ಸನ್ನು ಕಟ್ಟಿಹಾಕಿಕೊಂಡಿದ್ದರು. “ಮನೆಯ ಮರ್ಯಾದೆ ಬೀದಿಗೆ ಬರುತ್ತದೆ”, “ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ” ಎಂಬ ಭಯ ತಾಯಿಯನ್ನು ಮೌನಕ್ಕೆ ತಳ್ಳಿತ್ತು. ರಾತ್ರಿ ತಂದೆ ಮದ್ಯಪಾನ ಮಾಡಿ ಮನೆಗೆ ಬರುವಾಗ ತಾಯಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವುದು, ಅವಾಚ್ಯ ಶಬ್ದಗಳಿಂದ ತಾಯಿ ಮತ್ತು ಮಕ್ಕಳನ್ನು ನಿಂದಿಸುವುದು ದಿನಚರಿಯಾಗಿತ್ತು. ತಡರಾತ್ರಿವರೆಗೆ ಮನೆಯವರು ನಿದ್ರಿಸದೆ ಆತಂಕದಲ್ಲಿ ಕುಳಿತುಕೊಳ್ಳಬೇಕಾಗುತ್ತಿತ್ತು. ತಂದೆಯ ಈ ನಡವಳಿಕೆ ಹಾಗೂ ತಾಯಿಯ ಅಸಹಾಯಕ ನೋವು, ರಾಹುಲ್‌ನ ಮನಸ್ಸಿನಲ್ಲಿ ಆಳವಾದ ಭಾವನಾತ್ಮಕ ಸಮಸ್ಯೆಗಳಿಗೆ ಕಾರಣವಾಗಿತ್ತು. ಸರಿಯಾದ ನಿದ್ರೆ ಇಲ್ಲದೆ, ತನ್ನ ನೋವನ್ನು ಯಾರೊಂದಿಗೂ ಹಂಚಿಕೊಳ್ಳಲು ಅವಕಾಶವಿಲ್ಲದೆ, ನೆಮ್ಮದಿಯ ಬದುಕಿನಿಂದ ದೂರವಾಗಿದ್ದ ರಾಹುಲ್ ಅಧೀರನಾಗಿ ಕಾಣುತ್ತಿದ್ದ. ಈ ಎಲ್ಲ ಅಂಶಗಳನ್ನು ಸಮಾಲೋಚನೆಯಲ್ಲಿ ತಾಯಿಯೊಂದಿಗೆ ಚರ್ಚಿಸಲಾಯಿತು.
ಮೊದಲ ಬಾರಿಗೆ ತನ್ನ ಮನದಾಳದ ನೋವನ್ನು ಹೊರಹಾಕಿದಾಗ, ತಾಯಿಗೂ ಮನಸ್ಸು ಹಗುರವಾದ ಅನುಭವವಾಯಿತು. ಸಾಮಾನ್ಯವಾಗಿ ನಾವು ಗಮನಿಸುವಂತೆ, ಸಮಸ್ಯಾತ್ಮಕ ನಡವಳಿಕೆ ತೋರಿಸುವ ಮಕ್ಕಳು ಬಹುತೇಕ ಸಂದರ್ಭಗಳಲ್ಲಿ ತೀವ್ರ ಒತ್ತಡ, ನಿರ್ಲಕ್ಷ್ಯ ಹಾಗೂ ಭಾವನಾತ್ಮಕ ನೋವಿನಿಂದ ಬಳಲುತ್ತಿರುತ್ತಾರೆ. ವಿಶೇಷವಾಗಿ ಮದ್ಯವ್ಯಸನಿಗಳ ಮಕ್ಕಳು ಸಮಾಜದಲ್ಲಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುವವರಾಗಿದ್ದು, ಅವರಲ್ಲಿ ಭಾವನಾತ್ಮಕ ಸಮಸ್ಯೆಗಳು ಹೆಚ್ಚು ಕಂಡುಬರುತ್ತವೆ. “ಮನೆಯ ವ್ಯಸನವನ್ನು ಮುಚ್ಚಿಡಬೇಕು”, “ಮನೆಯ ಮರ್ಯಾದೆ ಉಳಿಯಬೇಕು”, “ಬೇರೆಯವರು ನಮ್ಮ ಸಮಸ್ಯೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ”ಎಂಬ ನಂಬಿಕೆಗಳು, ಮಗುವಿನ ಮನಸ್ಸಿನಲ್ಲಿ ‘ಯಾರನ್ನೂ ನಂಬಬೇಡ’, ‘ನಿನ್ನ ನೋವನ್ನು ಯಾರಿಗೂ ಹೇಳಬೇಡ’, ‘ಎಷ್ಟೇ ಕಷ್ಟವಾದರೂ ಹೊರಗೆ ತೋರಿಸಬೇಡ’ ಎಂಬ ಗಟ್ಟಿಯಾದ ಭಾವನೆಗಳನ್ನು ಬೆಳೆಸುತ್ತವೆ. ಪರಿಣಾಮವಾಗಿ ಮಕ್ಕಳು ಮುಖವಾಡ ಧರಿಸಿ, ತಾವು ಚೆನ್ನಾಗಿದ್ದೇವೆ ಎಂಬ ತೋರ್ಪಡಿಕೆಯ ಬದುಕನ್ನು ನಡೆಸಲು ಕಲಿಯುತ್ತಾರೆ. ಈ ಸಮಸ್ಯೆಗಳು ಮುಂದುವರಿದರೆ, ಮಕ್ಕಳು ಅಂತರ್ಮುಖಿಗಳಾಗುವುದು, ವ್ಯಕ್ತಿತ್ವದ ಅಸಮತೋಲನ, ಹೊಂದಾಣಿಕೆ ಸಮಸ್ಯೆಗಳು, ದೈಹಿಕ ಹಾಗೂ ಮಾನಸಿಕ ಶೋಷಣೆಗಳಿಗೆ ಒಳಗಾಗುವುದು ಮತ್ತು ಮುಖ್ಯವಾಗಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಮನೆಯಲ್ಲಿ ಒಬ್ಬರಿಗೆ ವ್ಯಸನದ ಸಮಸ್ಯೆ ಇದ್ದಾಗ, ಇನ್ನೊಬ್ಬ ಪೋಷಕನು ಅವಲಂಬಿತ (codependent) ನಡವಳಿಕೆಯನ್ನು ತೋರಿಸಿ ಸಮಸ್ಯೆ ಉಲ್ಬಣಗೊಳ್ಳುವಂತೆ ಮಾಡಬಾರದು.
ಮಕ್ಕಳ ಪೋಷಣೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು ಎಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು. ವ್ಯಸನದ ಪರಿಣಾಮ ಮಕ್ಕಳ ಜೀವನದ ಮೇಲೆ ಬೀಳದಂತೆ ನೋಡಿಕೊಳ್ಳುವ ಪ್ರಯತ್ನ ಅನಿವಾರ್ಯ. ಮಕ್ಕಳು ಪೋಷಕರ ಮಾತುಗಳಿಗಿಂತ ಅವರ ನಡವಳಿಕೆಯನ್ನು ಹೆಚ್ಚು ಅನುಸರಿಸುತ್ತಾರೆ. ತಂದೆಯ ನಡವಳಿಕೆಯಲ್ಲಿ ಸಮಸ್ಯೆ ಇದ್ದರೂ, ತಾಯಿಯ ತಾಳ್ಮೆ, ಸಹನೆ ಹಾಗೂ ಪ್ರಬುದ್ಧ ನಡವಳಿಕೆ ಮಗುವಿನ ಭವಿಷ್ಯಕ್ಕೆ ಭದ್ರವಾದ ಬುನಾದಿಯಾಗಬಹುದು. ಗಂಡನ ಕುರಿತ ಚಿಂತೆಯಲ್ಲೇ ಮುಳುಗದೆ, ಸಂಸಾರದ ಮೇಲೆ ಗಮನ ಹರಿಸುವುದು ಅಗತ್ಯ. ಮನೆಯಲ್ಲೊಂದು ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ, ತಂದೆ ರಾತ್ರಿ ಕುಡಿದು ಬಂದು ಮಕ್ಕಳ ಓದಿಗೆ ಅಡ್ಡಿಯಾಗುವ ಪರಿಸ್ಥಿತಿ ಇದ್ದರೆ, ತಂದೆ ಮನೆಗೆ ಬರುವ ಮುಂಚೆಯೇ ಮಕ್ಕಳ ಶಾಲಾ ಚಟುವಟಿಕೆಗಳನ್ನು ಮುಗಿಸುವಂತೆ ನೋಡಿಕೊಳ್ಳಬೇಕು.
ಪಾಠಗಳಲ್ಲಿ ಸಹಾಯ ಮಾಡುವುದು ಮತ್ತು ಮಕ್ಕಳಿಗೆ ಜವಾಬ್ದಾರಿಯುತ ನಡವಳಿಕೆಗಳನ್ನು ಕಲಿಸುವುದು ಬಹಳ ಮುಖ್ಯ.
ಮನೆಯಲ್ಲೇ ಸಾಧ್ಯವಾದಷ್ಟು ಆರೋಗ್ಯಕರ ಆಹಾರ ತಯಾರಿಸಿ, ಅನಾರೋಗ್ಯಕರ ಆಹಾರದಿಂದ ಮಕ್ಕಳನ್ನು ದೂರವಿಡಬೇಕು. ಹಣದ ಮೌಲ್ಯವನ್ನು ಕಲಿಸಿ, ಮಕ್ಕಳ ಖರ್ಚಿನ ಮೇಲೆ ಗಮನವಿಡಬೇಕು. ಶಾಲೆಯಿಂದ ಮಗು ತಡವಾಗಿ ಬಂದಾಗ ಕಾರಣವನ್ನು ತಿಳಿದುಕೊಳ್ಳಬೇಕು. ಅವರ ಸ್ನೇಹಿತರ ವಲಯ ಹಾಗೂ ಸಾಮಾಜಿಕ ಸಂಪರ್ಕದ ಬಗ್ಗೆ ಎಚ್ಚರಿಕೆಯಿಂದ ಗಮನ ಹರಿಸಿ ಸರಿಯಾದ ಮಾರ್ಗದರ್ಶನ ನೀಡಬೇಕು. ತಂದೆಯ ವ್ಯಸನದಿಂದಾಗುವ ತೊಂದರೆಗಳನ್ನು ಮಕ್ಕಳಿಗೆ ಪ್ರಾಯೋಚಿತವಾಗಿ ವಿವರಿಸಿ, ದುಶ್ಚಟಗಳಿಂದ ದೂರವಿರುವಂತೆ ಮಾರ್ಗದರ್ಶನ ನೀಡಬೇಕು. ಜೊತೆಗೆ ತಂದೆಯ ವ್ಯಕ್ತಿತ್ವವನ್ನು ಕೀಳಾಗಿ ನೋಡದಂತೆ, ಮದ್ಯವ್ಯಸನ ಒಂದು ಕಾಯಿಲೆ ಎಂಬ ಅರಿವನ್ನು ಮಕ್ಕಳಿಗೆ ನೀಡುವುದು ಅತ್ಯಂತ ಅಗತ್ಯ. ಮಕ್ಕಳು ಪೋಷಕರೊಂದಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಕಲ್ಪಿಸಬೇಕು. ಮನೆಯಲ್ಲಿ ಯಾವುದೇ ವಿಷಯವೂ “ಮಾತನಾಡಬಾರದು” ಎಂಬ ಅಸ್ಪೃಶ್ಯ ವಿಷಯವಾಗಿರಬಾರದು. ಮಗುವಿನ ಆತ್ಮವಿಶ್ವಾಸ ಹೆಚ್ಚಿಸಿ, ಆತಂಕ ಕಡಿಮೆ ಮಾಡುವಂತೆ ಧೈರ್ಯ ತುಂಬಬೇಕು. ಸಣ್ಣ ತಪ್ಪುಗಳು ಅಥವಾ ಸೋಲುಗಳ ಸಂದರ್ಭಗಳಲ್ಲಿ ಹಂಗಿಸದೆ, ಇತರರೊಂದಿಗೆ ಹೋಲಿಕೆ ಮಾಡದೆ, “ನಿನ್ನಲ್ಲೂ ಸಾಮರ್ಥ್ಯ ಇದೆ, ನೀನು ಖಂಡಿತ ಸಾಧಿಸಬಲ್ಲೆ” ಎಂಬ ಮಾತುಗಳಿಂದ ಉತ್ಸಾಹ ತುಂಬಬೇಕು.
ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಕುರಿತು ಮುಂಚಿತವಾಗಿಯೇ ಅರಿವು ನೀಡುವುದು ಅತ್ಯಂತ ಅಗತ್ಯ. ತಂದೆ ಮದ್ಯಪಾನದಲ್ಲಿರುವ ಸಂದರ್ಭಗಳಲ್ಲಿ, ಕೆಲವರು ಸಹಾಯದ ನೆಪದಲ್ಲಿ ಬಂದು ತಾಯಿ ಅಥವಾ ಮಕ್ಕಳ ಮೇಲೆ ಅನುಚಿತ ನಡವಳಿಕೆ ತೋರಿಸುವ ಸಾಧ್ಯತೆ ಇರುವುದನ್ನು ಮಕ್ಕಳಿಗೆ ಜಾಗೃತಗೊಳಿಸಬೇಕು. ಮಕ್ಕಳು ಯಾರಾದರೂ ವ್ಯಕ್ತಿಯ ಬಗ್ಗೆ ಅಸಹಜ ಭಯ ಅಥವಾ ಮುಜುಗರ ವ್ಯಕ್ತಪಡಿಸಿದರೆ, ಅದನ್ನು ನಿರ್ಲಕ್ಷಿಸದೆ, ಅವರ ಆತಂಕದ ಮೂಲವನ್ನು ಅರಿಯಲು ಪ್ರಯತ್ನಿಸಬೇಕು. ಕನಿಷ್ಠ ಹತ್ತನೇ ತರಗತಿ ವರೆಗೂ ಮಕ್ಕಳಿಗೆ ಸ್ವಂತ ಮೊಬೈಲ್ ನೀಡದೆ, ಅಗತ್ಯವಿದ್ದರೆ ಪೋಷಕರ ಮೊಬೈಲ್ ಬಳಸಲು ಅವಕಾಶ ನೀಡಬೇಕು. 18 ವರ್ಷದವರೆಗೆ ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಡುವ ಪ್ರಯತ್ನ ಮಾಡಬೇಕು. ಮಕ್ಕಳಿಗೆ ವಿಧಿಸುವ ನಿಯಮಗಳು ಪೋಷಕರ ಮನಸ್ಥಿತಿಗೆ ಅವಲಂಬಿತವಾಗಿರದೆ, ಸ್ಥಿರತೆ ಹಾಗೂ ಸ್ಪಷ್ಟತೆಯೊಂದಿಗೆ ಪಾಲನೆಯಾಗಬೇಕು. ಇದರ ಜೊತೆಗೆ ಪೋಷಕರು ತಮ್ಮ ಆರೋಗ್ಯದ ಮೇಲೂ ಗಮನ ಹರಿಸಬೇಕು. ಉತ್ತಮ ಆಹಾರ, ವ್ಯಾಯಾಮ, ಹವ್ಯಾಸಗಳು ಹಾಗೂ ಸಮಯೋಚಿತ ಆರೋಗ್ಯ ತಪಾಸಣೆಗಳು ಮಕ್ಕಳಿಗೆ ಒಳ್ಳೆಯ ಮಾದರಿಯಾಗುತ್ತವೆ. ತಂದೆ ಕುಡಿದು ಬಂದಾಗ ಗಲಾಟೆ ಮಾಡುವುದಕ್ಕಿಂತ, ಆತ ಕುಡಿಯದೆ ಇರುವ ಸಂದರ್ಭಗಳಲ್ಲಿ ಮನೆಯ ವಿಷಯಗಳನ್ನು ಚರ್ಚಿಸಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಮದ್ಯಪಾನವನ್ನು ನೈತಿಕ ದೋಷವಲ್ಲ, ಚಟವಲ್ಲ. ಇದು ಒಂದು ಕಾಯಿಲೆ ಎಂದು ಅರಿತುಕೊಂಡಾಗ ಮಾತ್ರ ಪರಿಹಾರದ ದಾರಿ ತೆರೆದುಕೊಳ್ಳುತ್ತದೆ.
ಮೌನವಾಗಿ ನೋವು ಅನುಭವಿಸುವ ಮಕ್ಕಳ ಮನಸ್ಸನ್ನು ಅರಿಯುವ ಸಂವೇದನಾಶೀಲತೆ ಇಂದು ನಮ್ಮ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ.
ಸೌಜನ್ಯ ಶೆಟ್ಟಿ (ಆಡಳಿತಾಧಿಕಾರಿಗಳು ಮತ್ತು ಆಪ್ತ ಸಮಾಲೋಚಕರು,
ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ)




By
ForthFocus™