Home ಅಂಕಣ ನಮ್ಮ ಬುದ್ದಿವಂತಿಕೆಯ ಬಗ್ಗೆ ವಿಶ್ವಾಸವಿರಲಿ

ನಮ್ಮ ಬುದ್ದಿವಂತಿಕೆಯ ಬಗ್ಗೆ ವಿಶ್ವಾಸವಿರಲಿ

250
0

ರೀಕ್ಷೆ ನಡೆಯುತ್ತಿದೆ. ಕೆಲವು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುತ್ತಾರೆ. ಕೆಲವರಿಗೆ ಕಡೆಮೆ ಅಂಕ ಬರುತ್ತದೆ. ಹಾಗಾದರೆ ಕಡಿಮೆ ಅಂಕ ಪಡೆದವರು ಬುದ್ದಿವಂತರಲ್ಲವೆ? ಬರೀ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದದಕ್ಕೆ ದಡ್ಡರು ಎಂದು ಪರಿಗಣಿಸಲಾಗುತ್ತದೆಯೆ? ಖಂಡಿತವಾಗಿಯು ಇಲ್ಲ. ಯಾಕೆ ಹೀಗೆ ಎಂದು ತಿಳಿದುಕೊಳ್ಳೋಣ. ಬುದ್ಧಿಶಕ್ತಿ ಎನ್ನುವುದು ಒಬ್ಬ ವ್ಯಕ್ತಿಯ ಗ್ರಹಿಕೆ, ಕೌಶಲ್ಯ ಸಾಮರ್ಥ್ಯ ಹಾಗೂ ಅದನ್ನು ಅನ್ವಯಿಸುವುದು. ಪ್ರತಿಯೊಂದು ವ್ಯಕ್ತಿಗೆ ತಮ್ಮದೇ ಆದ ಬುದ್ಧಿವಂತಿಕೆ ಇರುವುದು. ಒಬ್ಬ ವ್ಯಕ್ತಿ ಕಲೆಯಲ್ಲಿ ಬುದ್ಧಿವಂತನಾದರೆ ಗಣಿತದಲ್ಲಿ ದುರ್ಬಲ ಇರಬಹುದು. ಆದರೆ ಇದರ ಅರ್ಥ ಆ ವ್ಯಕ್ತಿ ಬುದ್ಧಿವಂತನಲ್ಲ ಎಂದಲ್ಲ. ಹಾರ್ವಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆದ ಹಾವರ್ಡ್ ಗಾರ್ಡನರ್ ತಮ್ಮ ಪುಸ್ತಕ ಫ್ರೇಮ್ಸ್ ಆಫ್ ಮೈಂಡ್ ಅಲ್ಲಿ ಥಿಯರಿ ಆಫ್ ಮಲ್ಟಿಪಲ್ ಇಂಟೆಲಿಜೆನ್ಸ್ ಬಗ್ಗೆ ವಿವರಿಸಿದ್ದಾರೆ. ಇವರು ಇದುವರೆಗೆ 9 ಪ್ರಕಾರದ ಬುದ್ಧಿಶಕ್ತಿ ಇರುವುದು ಗಮನಿಸಿದ್ದಾರೆ.

1. ಲಾಜಿಕಲ್ ಮತ್ತು ಮೆಥಮೆಟಿಕಲ್ ಇಂಟೆಲಿಜೆನ್ಸ್: ಇದರಲ್ಲಿ ವ್ಯಕ್ತಿಯ ತಾರ್ಕಿಕ ಬುದ್ಧಿ ಶಕ್ತಿ ಅಧಿಕವಿರುತ್ತದೆ, ಅಂದರೆ ವಿಷಯವನ್ನು ಗ್ರಹಿಸುವ, ಗುರುತಿಸುವ ಬುದ್ಧಿಶಕ್ತಿ ಅಧಿಕವಿರುವುದು. ಹೊಸ ಹೊಸ ಸಂಶೋಧನೆ, ವೈಜ್ಞಾನಿಕ ವಿಚಾರಣೆ, ವಸ್ತುಗಳ ನಡುವೆ ಸಂಬಂಧವನ್ನು ಗುರುತಿಸುವುದು ಈ ವ್ಯಕ್ತಿಯಲ್ಲಿ ಕಾಣಬಹುದು. ಇವರು ಗಣಿತ ಹಾಗೂ ಲಾಜಿಕ್ ನಿಂದ ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹರಿಸುತ್ತಾರೆ. ಇಂತಹ ಬುದ್ಧಿವಂತಿಕೆ ನಾವು ವಿಜ್ಞಾನಿಗಳಲ್ಲಿ ಮತ್ತು ಗಣಿತಶಾಸ್ತ್ರಜ್ಞರಲ್ಲಿ ಕಾಣಬಹುದು.

2. ನ್ಯಾಚುರಲಿಸ್ಟಿಕ್ ಇಂಟೆಲಿಜೆನ್ಸ್: ಇವರು ಜೀವಿಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿರುವವರು.ಹವಾಮಾನವನ್ನು, ಪ್ರಾಣಿ ಪಕ್ಷಿಗಳನ್ನು, ಕಲ್ಲು ಬಂಡೆಗಳನ್ನು ವಿಶ್ಲೇಷಿಸುತ್ತಾರೆ. ಬೇಟೆಗಾರನಲ್ಲಿ ನಾವು ಇಂತಹ ಬುದ್ಧಿವಂತಿಕೆ ಕಾಣಬಹುದು.

3. ಇಂಟರ್ ಪರ್ಸನಲ್ ಇಂಟಲಿಜೆನ್ಸ್: ಜನರ ಭಾವನೆಗಳನ್ನು ಹಾಗೂ ಉದ್ದೇಶವನ್ನು ಅರ್ಥಮಾಡಿಕೊಳ್ಳುವ ಬುದ್ಧಿಶಕ್ತಿ. ಇವರಲ್ಲಿ ಇತರರನ್ನು ಮನವೊಲಿಸುವ ಹಾಗು ಪ್ರೇರೇಪಿಸುವ ಜಾಣ್ಮೆ ಕಾಣಬಹುದು. ರಾಜಕಾರಣಿ, ಶಿಕ್ಷಕರು ಇವರಲ್ಲಿ ಈ ಬುದ್ಧಿವಂತಿಕೆಯನ್ನು ಕಾಣಬಹುದು.

4. ಮ್ಯೂಸಿಕಲ್ ಇಂಟೆಲಿಜೆನ್ಸ್: ಸಂಗೀತದ ಉಚ್ಚ ಸ್ವರ, ಶಬ್ದ ಅದರ ಧ್ವನಿ, ಲಯ ಗ್ರಹಿಸುವುದರಲ್ಲಿ ನಿಪುಣರು. ಇದರಲ್ಲಿ ಕಲ್ಪನಾಶಕ್ತಿ ಹಾಗೂ ಸೃಜನಶೀಲತೆ ಬೇಕು. ಸಂಗೀತಗಾರರು, ಸಂಗೀತ ವಾದ್ಯಗಳನ್ನು ನುಡಿಸುವವರಲ್ಲಿ ಇದನ್ನು ಕಾಣಬಹುದು .

5. ಸ್ಪಾಶಿಯಲ್ ಇಂಟಲಿಜೆನ್ಸ್: ಜಗತ್ತನ್ನು ಮೂರು ಆಯಾಮಗಳಲ್ಲಿ ದೃಶ್ಯೀಕರಿಸುವವರು. ಎಲ್ಲರಿಗೂ ಇದು ಅಸಾಧ್ಯ. ಏಕಾಗ್ರತೆ ಹೆಚ್ಚು ಇರುವವರಲ್ಲಿ ಮಾತ್ರ ಸಾಧ್ಯ. ಇಂತಹ ವ್ಯಕ್ತಿಗಳು ಪಜಲ್ ಗಳನ್ನು ಬೇಗ ಪರಿಹರಿಸುತ್ತಾರೆ. ಈ ರೀತಿಯ ಬುದ್ಧಿವಂತಿಕೆ ನಾವು ಇಂಜಿನಿಯರ್ ಗಳು, ಆರ್ಕಿಟೆಕ್ಟ್, ಕಲಾವಿದರಲ್ಲಿ ಕಾಣಬಹುದು.

6. ಕೈನೆಸ್ಟಿಕ್ ಇಂಟಲಿಜೆನ್ಸ್: ದೇಹ ಹಾಗೂ ಮನಸ್ಸಿನ ಹೊಂದಾಣಿಕೆ ಅಧಿಕವಿರುವವರು. ಇಲ್ಲಿ ತಮ್ಮ ದೇಹವನ್ನು ಅನನ್ಯ ರೀತಿಯಲ್ಲಿ ಉಪಯೋಗಿಸುತ್ತಾರೆ. ಇವರಲ್ಲಿ ಬಾಡಿ ಬ್ಯಾಲೆನ್ಸ್ ಅಧಿಕವಿರುತ್ತದೆ. ಕ್ರೀಡಾಪಟುಗಳು, ನೃತ್ಯ ಕಲಾವಿದರಲ್ಲಿ ಇದನ್ನು ಕಾಣಬಹುದು.

7. ಲಿಂಗ್ವಿಸ್ಟಿಕ್ ಇಂಟಲಿಜೆನ್ಸ್: ಭಾಷೆಯಲ್ಲಿ ನಿಪುಣರು. ಮಾತನಾಡುವಾಗ ಸರಿಯಾದ ಪದಗಳ ಬಳಕೆ ಮಾಡುವವರು, ಸಂವಹನ ಕೌಶಲ್ಯವಿರುವವರು. ಲೇಖಕರು, ಮಾತುಗಾರರಲ್ಲಿ ಈ ಬುದ್ಧಿಶಕ್ತಿಯನ್ನು ಕಾಣಬಹುದು.

8. ಇಂಟ್ರಾಪರ್ಸನಲ್ ಇಂಟಲಿಜೆನ್ಸ್: ನಮ್ಮನ್ನು ನಾವು ಅರಿತುಕೊಳ್ಳುವ ಬುದ್ಧಿವಂತಿಕೆ. ನಮಗೇನು ಬೇಕು ಆರಿತುಕೊಳ್ಳುವವರು. ಮಹಾನ್ ಚಿಂತಕರಲ್ಲಿ, ಲೇಖಕರಲ್ಲಿ, ತತ್ತ್ವಜ್ಞಾನಿಗಳಲ್ಲಿ ಈ ಬುದ್ಧಿವಂತಿಕೆಯನ್ನು ಕಾಣಬಹುದು.

9. ಎಕ್ಸಿಸ್ಟೆನ್ಶಿಯಲ್ ಇಂಟಲಿಜೆನ್ಸ್: ಇವರು ಬಹಳ ಗಾಢ ಚಿಂತಕರು. ನಾವೆಲ್ಲ ಏಕೆ ಜೀವಿಸುತ್ತೇವೆ? ಎಲ್ಲಿಂದ ಬಂದೆವು? ಏಕೆ ಈ ಲೋಕದಲ್ಲಿದ್ದೇವೆ? ಈ ತರದ ಆಲೋಚನೆ ಮಾಡುವವರು ಹಾಗೆ ಉತ್ತರವನ್ನು ತಿಳಿಯಲು ಪ್ರಯತ್ನಿಸುವವರು. ಈ ಬುದ್ಧಿವಂತಿಕೆಯನ್ನು ವಿಜ್ಞಾನಿಗಳಲ್ಲಿ ಕಾಣಬಹುದು.

ಹೀಗೆ 9 ಬುದ್ದಿವಂತಿಕೆಯನ್ನು ವಿಂಗಡಿಸಲಾಗಿದೆ. ಇನ್ನು ಅನೇಕ ಬುದ್ದಿವಂತಿಕೆವಿರಬಹುದು. ಜೀವನದಲ್ಲಿ ನಾವು ಎಲ್ಲದರಲ್ಲೂ ಬುದ್ಧಿವಂತರಾಗಲು ಸಾಧ್ಯವಿಲ್ಲ, ಅದರ ಅಗತ್ಯವೂ ಇಲ್ಲ. ಒಂದರಲ್ಲಿ ಬುದ್ಧಿವಂತರಾದರೆ ಸಾಕು, ನಮ್ಮ ಯಶಸ್ಸು ನಮ್ಮ ಕೈಯಲ್ಲಿರುತ್ತದೆ. ನಮ್ಮ ಬುದ್ದಿವಂತಿಕೆಯ ಬಗ್ಗೆ ನಮಗೆ ವಿಶ್ವಾಸವಿದ್ದರೆ ಸಾಕು.

-ಡಾ.ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.