ಬಹುತೇಕ ಮಂದಿ “ನೀರಕ್ಕಿ” (ನೀರು ಹಕ್ಕಿ) ಎಂದು ಕರೆಯುವ ವೈಟ್ ಬ್ರೊವ್ಡ್ ವ್ಯಾಗ್ ಟೈಲ್ ಎಂಬ ಈ ಹಕ್ಕಿ ಬಾಲವನ್ನು ಪಟಪಟನೆ ಮೇಲೆ ಕೆಳಗೆ ಮಾಡಿ ನೆಲದಲ್ಲಿ ವೇಗವಾಗಿ ಅತ್ತಿತ್ತ ಹೋಗಿ ಆಹಾರ ಹುಡುಕುತ್ತದೆ. ಈ ಪುಟ್ಟ ಹಕ್ಕಿಯ ವಿಶೇಷತೆ ಏನೆಂದರೆ ಇದರ ಕಣ್ಣಿನ ಹುಬ್ಬು. ಇದೇ ಕಾರಣದಿಂದ ಈ ಹಕ್ಕಿಯ ಹೆಸರು ‘ವೈಟ್ ಬ್ರೊವ್ಡ್ ವ್ಯಾಗ್ ಟೈಲ್.

ಮೇಲ್ಭಾಗದಲ್ಲಿ ಕಪ್ಪು ಹಾಗೂ ಕೆಳಭಾಗದಲ್ಲಿ ಬಿಳಿ ಬಣ್ಣದಿಂದ ಕೂಡಿದ ಈ ಚುರುಕು ಸ್ವಭಾವದ ಹಕ್ಕಿ ಸುಮಾರು 20 ರಿಂದ 21 ಸೆಂಟಿಮೀಟರ್ ಉದ್ದವಿದೆ.
ಮಧ್ಯಮ ಗಾತ್ರದ ಈ ಹಕ್ಕಿ ಹೆಚ್ಚಾಗಿ ನದಿ, ಟ್ಯಾಂಕ್, ಕಾಲುವೆ, ಕೆರೆ, ಮತ್ತು ನಗರ ಪ್ರದೇಶಗಳಲ್ಲಿರುವ ನೀರಿನ ಸಂಗ್ರಹವಿರುವ ಕಡೆಗಳಲ್ಲಿ ಕಂಡುಬರುತ್ತದೆ.
ಮನೆಗಳ ಮೇಲ್ಛಾವಣಿ ಸೇರಿದಂತೆ ತೆರೆದ ಪ್ರದೇಶಗಳಲ್ಲಿಯೂ ಕಾಣಸಿಗುವ ಈ ಹಕ್ಕಿ ಬಹಳ ಚುರುಕು ಸ್ವಭಾವದ್ದಾಗಿದ್ದು ನೆಲದಲ್ಲಿ ಓಡಾಡುತ್ತಲೇ ಕೀಟಗಳನ್ನು ಬೇಟೆಯಾಡುತ್ತದೆ. “ಚೀ ಚೀ” ಎಂಬ ಇಂಪಾದ ಕೂಗುವ ಈ ಹಕ್ಕಿ, ನೀರಿನ ಹತ್ತಿರದ ಕವಾಟಗಳಲ್ಲಿ, ಸೇತುವೆಗಳ ಕೆಳಭಾಗದಲ್ಲಿ, ಕಟ್ಟಡದ ತುದಿಯಲ್ಲಿ ಗೂಡು ನಿರ್ಮಿಸುತ್ತದೆ. ಮನುಷ್ಯರ ಪರಿಸರದಲ್ಲಿ ಹೊಂದುಕೊಂಡು ಬದುಕುವ ಈ ಹಕ್ಕಿ “ಅಪಾಯದಲ್ಲಿಲ್ಲ” ಎಂದು ಐಯುಸಿಎನ್ ಹೇಳಿದೆ.
ಹೆಚ್ಚಾಗಿ ಈ ಹಕ್ಕಿ ಒಂಟಿಯಾಗಿಯೇ ಇರುತ್ತದೆ. ಸಂತಾನೋತ್ಪತ್ತಿಯ ಸಂದರ್ಭದಲ್ಲಿ (ಮಾರ್ಚ್ ತಿಂಗಳಿನಿಂದ ಅಕ್ಟೋಬರ್) ಮಾತ್ರ ಗಂಡು ಹೆಣ್ಣು ಹಕ್ಕಿಗಳು ಜತೆಯಾಗಿ ಕಾಣಸಿಗುತ್ತದೆ. ಬಳಿಕ 3 ರಿಂದ 5 ಹಕ್ಕಿಗಳ ಸಣ್ಣ ಗುಂಪು ಕಾಣಸಿಗಬಹುದು, ಆದರೆ ಈ ಹಕ್ಕಿಗಳು ದೊಡ್ಡ ಗುಂಪಿನಲ್ಲಿ ಕಾಣಸಿಗುವುದು ಅಪರೂಪದಲ್ಲೇ ಅಪರೂಪ.
ಡಾ. ಗಣೇಶ್ ಪ್ರಸಾದ್ ಜಿ. ನಾಯಕ್




By
ForthFocus™