ಪರಂಗಿ ಹಣ್ಣು ಅಂದರೆ ನಮ್ಮ ಪಪ್ಪಾಯ. ಈ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಕಾಣಸಿಗುವ ಹಾಗೂ ಎಲ್ಲಾ ಋತುಗಳಲ್ಲಿ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ.
ಆರೋಗ್ಯವಂತ ಜೀವನಕ್ಕೆ ಪಪ್ಪಾಯ: ಸಾಮಾನ್ಯ ಪಪ್ಪಾಯವು ಆರೋಗ್ಯ ಪ್ರಯೋಜನಗಳೊಂದಿಗೆ ತುಂಬಿದ ಹಣ್ಣಾಗಿದೆ. ಇದು ಹೊಟ್ಟೆಯ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅತ್ಯಂತ ಪೌಷ್ಟಿಕ ಹಣ್ಣು ಎಂದು ನಂಬಲಾಗಿದೆ. ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುವುವು. ಇದು ಕಿತ್ತಳೆಗಿಂತ ಹೆಚ್ಚಿನ ವಿಟಮಿನ್ ಸಿ ಯನ್ನು ಹೊಂದಿದೆ ಮತ್ತು ಜೀವಸತ್ವ ಎ ಮತ್ತು ಬಿ ಗಳ ಉತ್ತಮ ಮೂಲವಾಗಿದೆ.
ಕೂದಲು ಪೋಷಿಸುತ್ತದೆ: ಪಪ್ಪಾಯ ಖನಿಜಗಳು, ಜೀವಸ್ವತಗಳು ಮತ್ತು ಕಿಣ್ವಗಳ ಒಂದು ಉತ್ತಮ ಮೂಲವಾಗಿದೆ. ಇದು ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಅಲ್ಲದೇ ಕೂದಲನ್ನು ಹೊಳಪಿನಂತೆ ಮಾಡುತ್ತದೆ.
ಚರ್ಮದ ಕಲೆಗೆ ರಾಮಬಾಣ: ಪಪ್ಪಾಯಿ ಹಣ್ಣಿನ ಹೋಳಿನಿಂದ ಚರ್ಮವನ್ನು ಉಜ್ಜಿದರೆ ಚರ್ಮದ ಮೇಲಿನ ಕಲೆ ಮಾಯವಾಗುತ್ತದೆ.
ಕೊಲೆಸ್ಟ್ರಾಲ್ ನ್ನು ಕಡಿಮೆಗೊಳಿಸುತ್ತದೆ: ನಮ್ಮ ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವ ಪಪ್ಪಾಯಿ ಉತ್ತಮವಾದ ಫೈಬರ್‌ಗಳ ಮೂಲವಾಗಿದೆ. ಪಪ್ಪಾಯಿ ಸೇವಿಸುವ ಮೂಲಕ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಹೆಚ್ಚಾಗುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು: ಮಧುಮೇಹಕ್ಕೆ ಸಕ್ಕರೆ ಅಂಶ ಸೂಚ್ಯಂಕ ಕಡಿಮೆಯಾಗಿರುವುದರಿಂದ ಪಪ್ಪಾಯಿ ಉತ್ತಮ ಆಯ್ಕೆಯಾಗಿದೆ. ಹಲವಾರು ಸಂಶೋಧನೆಗಳ ಪ್ರಕಾರ ಪಪ್ಪಾಯಿ ಸಾರವು ವಾಸ್ತವವಾಗಿ ಟೈಪ್ 2 ಮಧುಮೇಹದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.
ಕಣ್ಣುಗಳನ್ನು ರಕ್ಷಿಸುತ್ತದೆ: ಪಪ್ಪಾಯಗಳು ಮಿಟಮಿನ್ ಎ, ಕಣ್ಣಿನ ಪೊರೆ ಹಾಗೂ ಇತರ ದೀರ್ಘಕಾಲದ ಕಣ್ಣಿನ ರೋಗಗಳನ್ನು ತಡೆಗಟ್ಟುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಪಪ್ಪಾಯಿಯಲ್ಲಿ ಫೈಬರ್ ಹೆಚ್ಚಿರುತ್ತದೆ ಹಾಗಾಗಿ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಹೊಟ್ಟೆ ಸಮಸ್ಯೆಗಳಾದ ಅಜೀರ್ಣ, ಹೊಟ್ಟೆ ಹುಣ್ಣು, ಹೊಟ್ಟೆ ಮತ್ತು ಎದೆ ಉರಿ ಸಮಸ್ಯೆಗಳಿಗೆ ಪಪ್ಪಾಯಿ ಹಣ್ಣು ಸಹಕಾರಿಯಾಗಿದೆ. ಅಲ್ಲದೇ ಪಿತ್ತಕೋಶದಲ್ಲಿರುವ ವಿಷ ವಸ್ತುಗಳನ್ನು ಹೊರಹಾಕುವಲ್ಲಿ ಇದು ಸಹಕಾರಿ.
ಮನೆ ಮುಂದೆ ಜಾಗವಿದ್ದರೆ ಒಂದಾದರೂ ಪಪ್ಪಾಯಿ ಗಿಡವನ್ನು ಬೆಳೆಸಿ ಇದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.
-ರಮಿತಾ ಶೈಲೇಂದ್ರ ರಾವ್, ಕಾರ್ಕಳ