ಚಿಕ್ಕಮಗಳೂರು, ಸೆ.12: ಜನಸಾಮಾನ್ಯರ ಬದುಕಿನಲ್ಲಿ ಆರ್ಥಿಕ ಬದಲಾವಣೆ ತರಲು ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ಬ್ಯಾಂಕ್ ಗಳ ಪಾತ್ರ ಮಹತ್ವದ್ದಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಬಡವರಿಗೆ ಸಾಲ ಸೌಲಭ್ಯ ವಿತರಿಸಲು ದೃಢ ಹೆಜ್ಜೆ ಇಡಬೇಕೆಂದು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅತ್ಯಂತ ಮಹತ್ವದ ಯೋಜನೆಯಾಗಿದ್ದು ಸಾಂಪ್ರದಾಯಿಕ ಕಸಬುದಾರರಿಗೆ ತರಬೇತಿ ಕೊಟ್ಟು 15,000ರೂ ವೆಚ್ಚದ ಉತ್ತಮ ಗುಣಮಟ್ಟದ ಉಚಿತ ಉಪಕರಣ ನೀಡಿ ಪ್ರಥಮ ಹಂತದಲ್ಲಿ ಯಾವುದೇ ಭದ್ರತೆ ಇಲ್ಲದೆ 1,00,000 ರೂಪಾಯಿ ಖಾತೆಗೆ ಜಮಾ ಮಾಡುವ ಈ ವಿನೂತನ ಯೋಜನೆ ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿಯಿದ್ದು ಕೂಡಲೇ ಅನುಷ್ಠಾನಕ್ಕೆ ಸಂಸದರು ಸೂಚಿಸಿದರು. ಕೈಗಾರಿಕಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಮಹೇಶ್ ಕುಮಾರ್ ಅವರು ಈಗಾಗಲೇ ಜಿಲ್ಲೆಯಲ್ಲಿ 6000 ಫಲಾನುಭವಿಗಳಿಗೆ ಯೋಜನೆಯ ಅನುಮೋದನೆಯಾಗಿದ್ದು ಈ ಪೈಕಿ 2500 ಅರ್ಜಿದಾರರಿಗೆ ತರಬೇತಿಯನ್ನು ನೀಡಲಾಗಿದೆ ಎಂದರು. ಜಿಲ್ಲೆಯ 11 ಕೇಂದ್ರಗಳು ಯೋಜನೆಯ ಫಲಾನುಭವಿಗಳಿಗೆ ತರಬೇತಿ ನೀಡಲು ಸಿದ್ಧವಾಗಿದೆ. ಸಣ್ಣಪುಟ್ಟ ತಾಂತ್ರಿಕ ದೋಷವನ್ನು ಹೊರತುಪಡಿಸಿ ಯೋಚನೆಯನ್ನು ಚುರುಕುಗೊಳಿಸುವುದು ಎಂದು ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪ್ರಶಾಂತ್ ಅವರು ಮಾಹಿತಿ ಒದಗಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಅವರು ಸೆಪ್ಟೆಂಬರ್ 25ಕ್ಕೆ ಚಿಕ್ಕಮಗಳೂರಿನಲ್ಲಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕಿನ ಇತರ ಸಾಲ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ ಏರ್ಪಡಿಸುವುದು ಎಂದು ಮಾಹಿತಿ ಒದಗಿಸಿದರು. ರಾಷ್ಟ್ರೀಕೃತ ಬೆಂಗಳೂರು ಜನಸಾಮಾನ್ಯರಿಗೆ ಕೊಡುವ ಸಾಲ ಸೌಲಭ್ಯದಲ್ಲಿ ವಿಳಂಬ ಮಾಡದೆ ಸ್ಟಾರ್ಟ್ ಅಪ್ ಯೋಜನೆಯ ಮೂಲಕ ನಿಗದಿಪಡಿಸಿದ ಗುರಿಯನ್ನು ತಲುಪುವುದಲ್ಲದೆ ಹೆಚ್ಚುವರಿ ಸಾಲ ಸೌಲಭ್ಯವನ್ನು ವಿತರಿಸಬೇಕು. ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಉದ್ಯಮದಾರರಿಗೆ ಸಾಲ ಸೌಲಭ್ಯ ವಿತರಿಸುವ ಬಗ್ಗೆ ಮುತುವರ್ಜಿ ವಹಿಸಬೇಕು. ಪಿಎಂ ಸ್ವನಿಧಿ, ಮುದ್ರಾ ಯೋಜನೆ ಬಡವರಿಗೆ ತಲುಪಿಸಬೇಕಾದಂತಹ ಹೊಣೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗಿರುತ್ತದೆ. ಕೃಷಿ ಸಾಲ ಗುರಿಮೀರಿದ ಸಾಧನೆ ಹೊಂದಬೇಕಾದ ಅಗತ್ಯವಿದೆ. ಇನ್ನೆರಡು ತಿಂಗಳಲ್ಲಿ ಪೂರ್ಣ ಪ್ರಗತಿಯ ಮಾಹಿತಿ ಮತ್ತು ವಿವಿಧ ಯೋಜನೆಗಳಿಗೆ ಕೊಟ್ಟಿರುವ ಗುರಿ, ವಿತರಿಸಿರುವ ಸಾಲದ ಮಾಹಿತಿಯೊಂದಿಗೆ ಬ್ಯಾಂಕಿನ ಅಧಿಕಾರಿಗಳು ಹಾಜರಿರಬೇಕೆಂದು ಸಂಸದರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ರಾಜಗೋಪಾಲ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್ ಕುಮಾರ್, ಜಿಲ್ಲಾ ಮಟ್ಟದ ಎಲ್ಲಾ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಲ್ಮರ್ಡಪ್ಪ, ವಿಶ್ವಕರ್ಮ ಯೋಜನೆಗಳ ಸಲಹಾ ಸಮಿತಿಯ ಸದಸ್ಯರಾದ ರವೀಂದ್ರ ಬೆಳವಾಡಿ, ವೆನಿಲಾ ಭಾಸ್ಕರ್, ಸಂತೋಷ್ ಕೋಟ್ಯಾನ್ ಉಪಸ್ಥಿತರಿದ್ದರು.