ಉಡುಪಿ, ಏ.20: ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ ಶನಿವಾರ ಮಧ್ಯಾಹ್ನದವರೆಗೆ ಹಲವೆಡೆ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗಿದೆ. ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು. ಕುಂದಾಪುರ ತಾಲೂಕಿನ ಕಾವ್ರಾಡಿ, ಅಂಪಾರು, ಚಿತ್ತೂರು, ಬೀಜಾಡಿಯಲ್ಲಿ ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಸಿಡಿಲು ಬಡಿದು ಮನೆಗಳಿಗೆ ಹಾನಿಯಾಗಿವೆ. ಶನಿವಾರ ಬೆಳಿಗ್ಗೆ ಸುಮಾರು 5 ಗಂಟೆಗೆ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಳೆ ಬಿದ್ದ ವಿವರ: ಉಡುಪಿ 35.3 ಮಿಮಿ, ಕುಂದಾಪುರ 51.3 ಮಿಮಿ, ಕಾರ್ಕಳ 32.2 ಮಿಮಿ, ಬೈಂದೂರು 19.9 ಮಿಮಿ, ಬ್ರಹ್ಮಾವರ 43.8 ಮಿಮಿ, ಕಾಪು 79.4 ಮಿಮಿ, ಹೆಬ್ರಿ 38.8 ಮಿಮಿ ಮಳೆಯಾಗಿದೆ. ಜಿಲ್ಲೆಯ ಹಲವೆಡೆ ಶನಿವಾರ ಮಧ್ಯಾಹ್ನದವರೆಗೆ ಹನಿ ಮಳೆಯಾಗುತ್ತಿತ್ತು, ಬಳಿಕ ಮೋಡ ಕವಿದ ವಾತಾವರಣವಿತ್ತು.