ಕೋಟ, ಏ.7: ಪ್ರತಿಯೊಬ್ಬರು ತೆರೆದ ಮನಸ್ಸಿನಿಂದ ಸೇವಾಕಾರ್ಯಗಳನ್ನು ಮಾಡಬೇಕು, ಆಗ ಮಾತ್ರ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಪ್ರಸಿದ್ಧ ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು ಹೇಳಿದರು. ಆದಿತ್ಯವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಕೋಟ, ರೋಟರಿ ಸಮುದಾಯದಳ ಮೂಡುಗಿಳಿಯಾರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಕೋಟ ಪಂಚವರ್ಣ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಜಂಟಿ ಆಶ್ರಯದಲ್ಲಿ ಮೂಡುಗಿಳಿಯಾರು ಶಾಲೆಯಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರು ಕ್ರಿಯಾಶೀಲತೆ ಬೆಳಸಿಕೊಂಡಾಗ ವಿವಿಧ ರೀತಿಯ ಸೇವಾಕಾರ್ಯ ನಡೆಸಲು ಸಾಧ್ಯವಾಗುತ್ತದೆ. ಇದಕ್ಕೆ ರೋಟರಿಯಂತಹ ಸಂಸ್ಥೆಗಳೇ ಸಾಕ್ಷಿ. ರಕ್ತದಾನದ ಬಗ್ಗೆ ಭಯ ಹೋಗಲಾಡಿಸಬೇಕು, ಪ್ರತಿಯೊಬ್ಬರು ರಕ್ತದಾನ ಮಾಡುವ ಮನಸ್ಥಿತಿ ಮೈಗೂಡಿಸಿಕೊಳ್ಳಬೇಕು ತನ್ಮೂಲಕ ದೈಹಿಕ ಕ್ಷಮತೆ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ, ರಕ್ತದಾನಕ್ಕೆ ಯಾವುದೇ ಜಾತಿ ಮತ ಪಂಥಗಳ ಬೇಧಗಳಿಲ್ಲ ಎಂದರು. ಅಧ್ಯಕ್ಷತೆಯನ್ನು ರೋಟರಿ ಸಮುದಾಯ ದಳದ ಅಧ್ಯಕ್ಷ ಶರಣಯ್ಯ ಹಿರೇಮಠ ವಹಿಸಿದ್ದರು. ಕೋಟ ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ.ಮಾಧವ್ ಪೈ ರಕ್ತದಾನ ಮಾಡುವುದರಿಂದ ಮನುಕುಲದ ಒಳಿತಿನ ಬಗ್ಗೆ ಹೇಳಿದರು.
ಮುಖ್ಯ ಅಭ್ಯಾಗತರಾಗಿ ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ರೋಟರಿ ಕ್ಲಬ್ ಸಹಾಯಕ ಗವರ್ನರ್ ಕೆ.ನರಸಿಂಹ ಪ್ರಭು, ಮಾಜಿ ಸಹಾಯಕ ಗವರ್ನರ್ ರಾಜೇಂದ್ರ ಸುವರ್ಣ, ಉದ್ಯಮಿ ಮಹೇಶ್ ಶೆಟ್ಟಿ, ರೋಟರಿ ಸಮುದಾಯ ದಳದ ಸಭಾಪತಿ ಕೆ.ಶ್ರೀಕಾಂತ ಶೆಣೈ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗುತ್ತಿಗೆದಾರ ಅಶೋಕ್ ಶೆಟ್ಟಿ ಬನ್ನಾಡಿ, ಜಿಲ್ಲಾ ರಕ್ತನಿಧಿ ಜಿಲ್ಲಾಸ್ಪತ್ರೆ ಇದರ ಮುಂಜುಳಾ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟಗಾರ್ ಸ್ವಾಗತಿಸಿ, ಶಿಕ್ಷಕಿ ನಾಗರತ್ನ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಸಮುದಾಯ ದಳದ ಕಾರ್ಯದರ್ಶಿ ಜಿ. ಗೋಪಾಲ್ ವಂದಿಸಿದರು.