ಮಂಗಳೂರು, ಮಾ.28: ಯಾವುದೇ ಕ್ರೀಡೆ, ಪಂದ್ಯಾಟದಲ್ಲಿ ಎಲ್ಲರಿಗೂ ಗೆಲ್ಲಲು ಸಾಧ್ಯವಿಲ್ಲ. ಸೋಲನ್ನು ಪಾಠವಾಗಿ ತಿಳಿದುಕೊಂಡು ಮುಂದಿನ ಪಂದ್ಯಕ್ಕೆ ತಯಾರಿಯನ್ನು ನಡೆಸಬೇಕು. ಸರ್ಕಾರಿ ಕಾಲೇಜುಗಳಲ್ಲಿ ಇಂತಹ ಕ್ರೀಡಾಕೂಟಕ್ಕೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಡೆರಿಕ್ ಚೆಸ್ ಸ್ಕೂಲ್‌ನ ಸಹ ಸಂಸ್ಥಾಪಕರಾದ ಪ್ರಸನ್ನ ರಾವ್ ಬಿ. ಹೇಳಿದರು. ಅವರು ಗುರುವಾರ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಚೆಸ್ ಪಂದ್ಯಾಟವನ್ನು ಆಡಲು ಅನುಭವದ ಅಗತ್ಯವಿದೆ. ಚೆಸ್ ಪಂದ್ಯಾಟದಲ್ಲಿ ಸಾಕಷ್ಟು ಅವಕಾಶಗಳಿದ್ದು, ಒಳ್ಳೆಯ ತರಬೇತುದಾರರ ಅವಕಾಶವಿದೆ. ವಿದ್ಯಾರ್ಥಿಗಳು ತರಬೇತುದಾರರೇ ಆಗಬೇಕೆಂದಿಲ್ಲ. ಉತ್ತಮ ಆಟಗಾರರಾಗಿಯೂ ಮುನ್ನಡೆಯಬಹುದು ಎಂದರು. ಚೆಸ್ ಗೆ ೨೫ ವರ್ಷಗಳ ಹಿಂದೆ ತರಬೇತುದಾರರೇ ಇರಲಿಲ್ಲ. ಆಗ ಪುಸ್ತಕಗಳನ್ನು ನೋಡಿ ಆಟವಾಡುತ್ತಿದ್ದೆವು. ಈಗ ಆನ್ ಲೈನ್ ಮೂಲಕ ಎಲ್ಲಾ ಮಾಹಿತಿಯೂ ಸಿಗುತ್ತದೆ. ಆದರೆ ಅದರಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂಬುವುದು ತಿಳಿಯುವುದಿಲ್ಲ. ಆದುದರಿಂದ ಒಬ್ಬ ಉತ್ತಮ ತರಬೇತುದಾರನ ಅವಶ್ಯಕತೆ ಇದೆ ಎಂದು ಹೇಳಿದರು. ಕೊರೋನಾ ಸಂದರ್ಭದಲ್ಲಿ ಎಲ್ಲಾ ಕ್ರೀಡೆಗಳಿಗೂ ಹಿನ್ನೆಡೆಯಾದರೆ ಚೆಸ್ ಮಾತ್ರ ಮುನ್ನಡೆಯಲ್ಲಿ ಇತ್ತು. ಪ್ರತಿಯೊಬ್ಬರೂ ಮನೆಯಲ್ಲಿ ಕೂತು ಚೆಸ್ ಆಟವಾಡುತ್ತಿದ್ದರು. ಒಳಾಂಗಣ ಕ್ರೀಡೆಯಲ್ಲಿ ಚೆಸ್ ಕಿಂಗ್ ಆಗಿ ಗುರುತಿಸಿಕೊಂಡಿದೆ ಎಂದು ಪ್ರಸನ್ನ ರಾವ್ ಹೇಳಿದರು. ಸ್ನಾತಕ ವಿಭಾಗದ ಮುಖ್ಯ ಸಂಯೋಜಕರಾದ ಪ್ರೊ. ವಸಂತಿ ಪಿ. ಮಾತನಾಡಿ, 16 ನೇ ಶತಮಾನದಲ್ಲಿ ಗುಪ್ತರು ಚೆಸ್ ಆಟವನ್ನು ಆಡುತ್ತಿದ್ದರು. ಚೆಸ್ ಆಟಕ್ಕೆ ಸ್ನಾಯು ಶಕ್ತಿಯ ಅಗತ್ಯವಿಲ್ಲ. ಮೆದುಳಿನ ಶಕ್ತಿ ಮಾತ್ರ ಅಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ. ಮಾತನಾಡಿ, ಜಿಲ್ಲೆಯಲ್ಲಿ 39 ಸರ್ಕಾರಿ ಕಾಲೇಜುಗಳು ಇದ್ದು, ಚೆಸ್ ಆಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸ್ಫರ್ಧಾ ಮನೋಭಾವದಲ್ಲಿ ಭಾಗವಹಿಸಿ, ಆಟದ ಸಂತೋಷವನ್ನು ಅನುಭವಿಸಿ ಎಂದು ಹೇಳಿದರು. ಐ.ಕ್ಯೂ.ಎ.ಸಿ.ಸಂಯೋಜಕರಾದ ದೇವಿಪ್ರಸಾದ್ ಶುಭ ಹಾರೈಸಿದರು. ಐ.ಕ್ಯೂ.ಎ.ಸಿ. ಸಹ-ಸಂಯೋಜಕರಾದ ಡಾ. ಜ್ಯೋತಿಪ್ರಿಯಾ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು ಹಾಗೂ ಸಂಯೋಜಕರಾದ ಶುಭ ಕೆ.ಹೆಚ್. ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಅಪರ್ಣ ಆಳ್ವ ಎನ್. ವಂದಿಸಿ, ವಿದ್ಯಾರ್ಥಿ ವಿರೂಪಾಕ್ಷ ನಿರೂಪಿಸಿದರು. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ೧೬ ಸರ್ಕಾರಿ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.