ಉಡುಪಿ, ಡಿ.31: ಕರ್ನಾಟಕ ವಿಧಾನಪರಿಷತ್ತಿನ ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿರುತ್ತಾರೆ. 1960 ರ ಮತದಾರರ ನೋಂದಣಿ ನಿಯಮಾವಳಿಗಳ ಅನುಸಾರವಾಗಿ 2023 ರ ನವೆಂಬರ್ 01 ನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದ ಕರಡು ಮತದಾರರ ಪಟ್ಟಿಗೆ ತಿದ್ದುಪಡಿಗಳ ಪಟ್ಟಿ ಸಿದ್ಧಪಡಿಸಿರುವುದನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ತಾಲೂಕು ತಹಶೀಲ್ದಾರ್‌ಗಳ ಕಚೇರಿಯಲ್ಲಿ ಹಾಗೂ ಜಿಲ್ಲಾಧಿಕಾರಿಗಳ ವೆಬ್‌ಸೈಟ್ ಮತ್ತು ceo.karnataka.gov.in ನಲ್ಲಿಯೂ ಲಭ್ಯವಿದೆ.
ಭಾರತ ಚುನಾವಣಾ ಆಯೋಗವು ಹೊರಡಿಸಿರುವ ನಾಮಪತ್ರಗಳ ಸ್ವೀಕೃತಿಯ ಕೊನೆಯ ದಿನಾಂಕದವರೆಗೆ ಹೆಸರು ಸೇರ್ಪಡೆಗೆ ಅವಕಾಶವಿದ್ದು, ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ನಮೂನೆ-19 ರಲ್ಲಿ (ದ್ವಿ ಪ್ರತಿಯಲ್ಲಿ) ಹಾಗೂ ಕರ್ನಾಟಕ ನೈರುತ್ಯ ಪದವಿಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-18 ರಲ್ಲಿ (ದ್ವಿ ಪ್ರತಿಯಲ್ಲಿ) ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಅಥವಾ ನಿಯೋಜಿತ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದ್ದು, ಎಲ್ಲಾ ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.