ಉಡುಪಿ, ನ.22: ವಿದ್ಯಾರ್ಥಿಗಳ ಪ್ರತಿಭೆಯನ್ನು ಬರೇ ಅಂಕಗಳಿಂದಲೇ ತೂಗುವುದು ತಪ್ಪು. ವಿದ್ಯಾರ್ಥಿಗಳ ಅಂತರ್ಗತ ಶಕ್ತಿಯನ್ನು ಬೆಳೆಸಲು ಪೂರಕವಾದ ಪರಿಸರ ಸೃಷ್ಟಿಸುವುದೇ ಶಿಕ್ಷಣದ ನಿಜವಾದ ಉದ್ದೇಶ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಗಳಿಕೆವೊಂದೇ ಅಂತಿಮ ಸಾಧನೆ ಅನ್ನುವ ರೀತಿಯಲ್ಲಿ ಹೆತ್ತವರು, ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಅವರ ಕಲಿಕೆಯ ಪ್ರಕ್ರಿಯೆ ಸಹಜ ರೀತಿಯಲ್ಲಿ ಆತ್ಮವಿಶ್ವಾಸ ಮೂಡಿಸುವ ತರದಲ್ಲಿ ಉದ್ದೀಪನಗೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಪಟ್ಟರು.
ಉಡುಪಿ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ರಕ್ಷಕ ಶಿಕ್ಷಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಪ್ರತಿನಿಧಿ ಐವನ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಂಗಳ ಕರುಣಾಕರ ಶೆಟ್ಟಿ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು. ಕಾಲೇಜು ರಕ್ಷಕ ಶಿಕ್ಷಕರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.