Home ಅಂಕಣ ಮಹತೋಭಾರ ಶ್ರೀ ವಿಶ್ವೇಶ್ವರ ದೇವಾಲಯ ಎಲ್ಲೂರು

ಮಹತೋಭಾರ ಶ್ರೀ ವಿಶ್ವೇಶ್ವರ ದೇವಾಲಯ ಎಲ್ಲೂರು

463
0

ತಾಲೂಕು ಕೇಂದ್ರವಾದ ಕಾಪುವಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಗ್ರಾಮವೇ ಎಲ್ಲೂರು.‌ ತುಳುನಾಡಿನ ಇತಿಹಾಸದ ಪ್ರಾಚೀನ ದಾಖಲೆಗಳಲ್ಲಿ ಉಲ್ಲೇಖಿತಗೊಂಡು, ಹಲವು ಧಾರ್ಮಿಕ ವಿಧಿ-ವಿಧಾನಗಳನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಂಡು ಬರುತ್ತಿರುವ ದೇವಾಲಯಗಳಲ್ಲಿ ಎಲ್ಲೂರಿನ ವಿಶ್ವೇಶ್ವರ ದೇವಾಲಯವೂ ಒಂದು.

ಎಲ್ಲೂರು ವಿಶ್ವೇಶ್ವರ ದೇವಾಲಯ: ಎಲ್ಲೂರು (ಕುಂಜೂರು‌ ಸಹಿತ), ಬೆಳಪು, ಕುತ್ಯಾರು, ಕಳತ್ತೂರು, ಪಾದೂರು, ನಂದಿಕೂರು(ಅಡ್ಡೆ ಸಹಿತ) ಮುಂತಾದ ಆರು ಗ್ರಾಮ‌ ವ್ಯಾಪ್ತಿಯನ್ನು ಹೊಂದಿರುವ ಎಲ್ಲೂರು ಸೀಮೆಗೆ ಪ್ರಾಚೀನ ವಿಶ್ವೇಶ್ವರ ದೇವಾಲಯವು ಸೀಮೆ ದೇವಸ್ಥಾನವಾಗಿದೆ. ಸ್ಕಾಂದ ಪುರಾಣಾಂತರ್ಗತ ಸಹ್ಯಾದ್ರಿ ಖಂಡದ ಎಲ್ಲೂರು ಮಹಾತ್ಮೆಯ ಪ್ರಕಾರ ಕುಂದ ಕುಲಸಂಜಾತನಾದ ಭೂರಿಕೀರ್ತಿ ಎಂಬ ಅರಸನ ತಪಸ್ಸಿಗೆ ಮೆಚ್ಚಿ ಕಾಶಿ ವಿಶ್ವನಾಥನು ಎಲ್ಲೂರಿಗೆ ಬಂದು ಲಿಂಗರೂಪದಲ್ಲಿ ಉದ್ಭವಿಸಿದನೆಂಬ‌ ಪ್ರತೀತಿಯಿದೆ.

ಸ್ಥಳನಾಮ ಐತಿಹ್ಯ: ಉದ್ಭವ ಮಹಾದೇವನು ಮೊದಲು ಬುಡಕಟ್ಟು ವರ್ಗದ ತಾಯಿಗೆ ಗೋಚರಿಸಿದ್ದು, ಈಕೆ ಮಗನನ್ನು‌ ಕಳೆದುಕೊಂಡಿದ್ದಳು. ಈ ತಾಯಿಯು ತನ್ನ ಮಗನ ಸಮಾಧಿ ಮಾಡಿದ‌ ಕಾಡಿನಲ್ಲಿ ಅಣಬೆ ತೆಗೆಯಲು ಕತ್ತಿಯನ್ನು ಉಪಯೋಗಿಸಿದಾಗ ಆ ಕತ್ತಿ, ಉದ್ಭವ ಲಿಂಗಕ್ಕೆ ತಾಗಿ ರಕ್ತ ಒಸರಿಸಲಾರಂಭಿಸಿತಂತೆ, ರಕ್ತದ ಹರಿವಿಗೆ ಹೆದರಿದ ಅವಳು “ಓಹ್, ಮಗಾ ಎಲ್ಲು, ಯೇ ಯಿ ಮೂಲು ಉಲ್ಲಾನಾ?” (‘ಓಹ್, ನನ್ನ ಮಗ ಎಲ್ಲು, ನೀನು ಇಲ್ಲಿದ್ದೀಯಾ?’) ಎಂದು ಹೇಳುತ್ತಾಳೆ. ವಾಸ್ತವವಾಗಿ ಅದು ಲಿಂಗ ಆಗಿತ್ತು ಮತ್ತು ಗಾಯದ ಗುರುತು ಇನ್ನೂ ಲಿಂಗದ ಮೇಲೆ ಇದೆ ಎಂದು ಹೇಳಲಾಗುತ್ತದೆ. ನಂತರ ಈ ಗ್ರಾಮವು ಯೆಲ್ಲುನ ಊರಿನಿಂದ ಕ್ರಮೇಣ ಎಲ್ಲೂರು ಎಂದು ಕರೆಯಲ್ಪಟ್ಟಿತು. ವಿಷಯ ತಿಳಿದ ಕುಂದ‌ ಹೆಗ್ಗಡೆ‌ ಅರಸ ಮತ್ತು ಆತನ ಗುರುಗಳು ಆಗಮಿಸಿ ಎಳನೀರು ಸುರಿದಾಗ ಮಹಾದೇವ ಗೋಚರಿಸಿದನು. ನಂತರದಲ್ಲಿ ಶಿವಲಿಂಗವನ್ನು ಹೊರ ತೆಗೆದು ಅವನನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿರುತ್ತಾರೆ ಎಂಬ ಪ್ರತೀತಿ‌ ಇದೆ.

ಚಾರಿತ್ರಿಕ ದಾಖಲೆಗಳು: ಮೈಸೂರು ಪ್ರದೇಶದ ಭೂ‌ ವೀಕ್ಷಣೆಗೆ ಈಸ್ಟ್ ಇಂಡಿಯಾ ಕಂಪನಿಯಿಂದ ನಿಯುಕ್ತನಾದ‌ ಕರ್ನಲ್ ಕಾಲಸ್ ಮೆಕೆನ್ಜಿ (1754-1821) ಸಂಗ್ರಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ 39 ಕೈಫಿಯತ್ತುಗಳಲ್ಲಿ ಎಲ್ಲೂರು ದೇವಸ್ಥಾನದ ಕೈಫಿಯತ್ತು ಒಂದು. ಕುತ್ಯಾರಿನಲ್ಲಿ‌ ಅರಮನೆ ಹೊಂದಿದ್ದ ಕುಂದ ಹೆಗ್ಗಡೆ ಎಲ್ಲೂರು ಕುಂದ ಹೆಗ್ಗಡೆ ‌ಎಂದೇ ಪ್ರಸಿದ್ಧ. ಇವರು ಶಾಸನದಲ್ಲಿ ತಮ್ಮನ್ನು ಶಂಕರಡಿಯ, ದೇವರಡಿಯ ಎಂದು ಗುರುತಿಸಿಕೊಳ್ಳುತ್ತ ದೇವರ ಮೇಲಿನ ಭಕ್ತಿಯನ್ನು ಪ್ರಕಟಿಸಿದ್ದಾರೆ. ಇಂತಹ 12 ಶಾಸನಗಳು, ಕೈಫಿಯತ್ತು ಹಾಗೂ ಸೋದೆಮಠದ ಶ್ರೀ ವಾದಿರಾಜ ತೀರ್ಥರ ಪ್ರವಾಸ ಕಥನ ತೀರ್ಥಪ್ರಬಂಧ ಉಲ್ಲೇಖಗಳು ಈ ಕ್ಷೇತ್ರಕ್ಕೆ ಐತಿಹಾಸಿಕ ಮಹತ್ವವನ್ನು ನೀಡುತ್ತದೆ.

ದೇವಾಲಯದ ವಾಸ್ತುಶೈಲಿ: ದೇವಾಲಯದ ಗರ್ಭಗುಡಿಯ ವಿನ್ಯಾಸ, ಪ್ರಧಾನ ಬಲಿಪೀಠ, ಬಲಿಮೂರ್ತಿ ಮುಂತಾದ ವಾಸ್ತುಶೈಲಿಯನ್ನು ಆಧರಿಸಿ ಈ ದೇವಾಲಯವು 10-11ನೆಯ ಶತಮಾನದಲ್ಲಿ ನಿರ್ಮಾಣವಾಗಿರಬಹುದು ಅಥವಾ ಜೀರ್ಣೋದ್ಧಾರವಾಗಿರಬಹುದೆಂದು ದಿ| ಡಾ| ಪಾದೂರು ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ. ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ಈ ಶಿಲೆಯು ರುದ್ರಾಕ್ಷಿ ಶಿಲೆ ಎಂಬ ಅಭಿಪ್ರಾಯವಿದೆ. ಈ ಸ್ವಯಂಭೂ ಲಿಂಗಕ್ಕೆ ವಿಶ್ವನಾಥ, ವಿಶ್ವೇಶ್ವರ, ಉಳ್ಳಾಯ, ಒಡೆಯ, ಶಂಭು ಎಂಬಿತ್ಯಾದಿ‌ ಹೆಸರುಗಳಿವೆ.

ದಕ್ಷಿಣದ ‌ಮತ್ತು ಉತ್ತರದ ಅಂಚುಗಳಲ್ಲಿ ಪರಸ್ಪರ ಅಭಿಮುಖವಾಗಿರುವಂತೆ ಗಣಪತಿ (11ನೆ ಶತಮಾನ) ಮತ್ತು ಅನ್ನಪೂರ್ಣೇಶ್ವರಿಯ (16ನೆ ಶತಮಾನ) ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಹನ್ನೆರಡು ‌ವರ್ಷಗಳಿಗೊಮ್ಮೆ ಕಾಶಿಯಿಂದ ಹರಿದು ಬರುತ್ತಿತ್ತೆಂದು ನಂಬಲಾಗಿರುವ ಭಾಗೀರಥಿ ‌ಕೆರೆ ದೇವಾಲಯ ಉತ್ತರದಲ್ಲಿದೆ. ಈಶಾನ್ಯಕ್ಕೆ ಅರ್ಧ ಕಿ.ಮೀ.ದೂರದಲ್ಲಿ ವೀರಭದ್ರ ಗುಡಿಯಿದೆ.

ದೇವಾಲಯದ ವೈಶಿಷ್ಟ್ಯತೆ: ಎಲ್ಲೂರಿನ‌ ವಿಶ್ವೇಶ್ವರನಿಗೆ ಎಳನೀರು ಪ್ರಿಯವಾದುದು ಹಾಗಾಗಿ ವಾರವೊಂದಕ್ಕೆ‌ ಕನಿಷ್ಠ 1000 ಎಳನೀರು ಅಭಿಷೇಕವಾಗುತ್ತದೆ. ಏಕೆಂದರೆ ಪರಶಿವನ ತಲೆಯಿಂದ ರಕ್ತವು ಚಿಮ್ಮುವುದನ್ನು ಕಂಡು ಅರಸರು ಎಳನೀರಿನ ಅಭಿಷೇಕವನ್ನು ಮಾಡುತ್ತಾರೆ. ಆಗ ಶಿವಲಿಂಗದಿಂದ ರಕ್ತ ಬರುವುದು ತಕ್ಷಣವೇ ನಿಲ್ಲುತ್ತದೆ ಹಾಗಾಗಿ ಎಲ್ಲೂರಿನ ವಿಶ್ವೇಶ್ವರನಿಗೆ ಎಳನೀರು ಅಭಿಷೇಕ ಶ್ರೇಷ್ಠ ಎಂದು ಪರಿಗಣಿಸಿ ಇಲ್ಲಿಗೆ ಬರುವ ಭಕ್ತರು ಸೀಯಾಳವನ್ನು ಪರಶಿವನಿಗೆ ಅರ್ಪಿಸುತ್ತಾರೆ. ಈ ಪುಣ್ಯ ಸ್ಥಳದಲ್ಲಿ ಇವತ್ತಿಗೂ ಎಳನೀರನ್ನು ಯಾರು ಕುಡಿಯುವಂತಿಲ್ಲ. ಬದಲಾಗಿ ದೇವರಿಗೆ ಅರ್ಪಿಸತ್ತಾರೆ.

ಸಂತಾನ ಪ್ರಾಪ್ತಿ, ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಕೋರಿ ಚಿನ್ನದ ನಾಣ್ಯ ಅರ್ಪಣೆ ಇಲ್ಲಿಯ ಸೇವಾ ವೈಶಿಷ್ಟ್ಯ. ವಿಶ್ವೇಶ್ವರನಿಗೆ ಎಳ್ಳೆಣ್ಣೆ ಸೇವೆ ನೀಡಿದರೆ ಸಕಲ ಗ್ರಹದೋಷ, ದುಷ್ಟಾರಿಷ್ಟ, ಆಪತ್ತು ದೂರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ರೋಗಭಾದೆ, ಬಾಲಗ್ರಹ ನಿವಾರಣೆಗೆ ತುಲಾಭಾರ ಸೇವೆ ಕೂಡ ಸ್ವಾಮಿಗೆ ಅರ್ಪಣೆಯಾಗುತ್ತಿದೆ. ಇತ್ತೀಚಿಗೆ ಕ್ಷೇತ್ರದ ಜೀರ್ಣೋದ್ಧಾರ 2009 ಮಾರ್ಚ್ ತಿಂಗಳಲ್ಲಿ ವಿಜೃಂಭಣೆಯಿಂದ ನಡೆದಿತ್ತು. ಈ ದೇವಾಲಯವು ಗ್ರಾಮದ ಗಡಿಯಲ್ಲಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೆ, ನೆರೆಯ ಜಿಲ್ಲೆಗಳಿಗೆ, ಯಾತ್ರಾರ್ಥಿಗಳು ಮತ್ತು ಭಕ್ತರಿಗೆ ಆರಾಧನೆಯ ಕೇಂದ್ರ ಸ್ಥಳವಾಗಿ ಹೆಸರುವಾಸಿಯಾಗಿದೆ‌.

ಬರಹ & ಸಂಗ್ರಹ: ಶ್ರುತಿ ಎಸ್ ಪೂಜಾರಿ, ದಿವ್ಯ– ದ್ವಿತೀಯ ಮತ್ತು ತೃತೀಯ ಬಿ.ಎ ವಿದ್ಯಾರ್ಥಿನಿಯರು, ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.