ಮಂಗಳೂರು, ಅ.6: ವಿದ್ಯಾರ್ಥಿಗಳು ತಮ್ಮ ಅಧ್ಯಯನದೊಂದಿಗೆ ಭವಿಷ್ಯದ ಬಗ್ಗೆ ಸ್ಪಷ್ಟವಾದ ಉದ್ದೇಶ ಮತ್ತು ಗುರಿ ಇಟ್ಟುಕೊಳ್ಳಬೇಕು. ನಿರಂತರ ಓದು ಮತ್ತು ಕಠಿಣ ಪರಿಶ್ರಮದೊಂದಿಗೆ ಪ್ರಯತ್ನಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ಇದರ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಎಸ್ ಹೊಸಮನಿ ಹೇಳಿದರು. ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ, ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ‘ಕರ್ನಾಟಕ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು’ ಎಂಬ ವಿಷಯದ ಕುರಿತಾದ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟಸಾಧ್ಯ, ನಿರಂತರ ಓದು ಅಗತ್ಯ. ಸಾರ್ವಜನಿಕ ಗ್ರಂಥಾಲಯವು ಡಿಜಿಟಲ್ ಲೈಬ್ರರಿ ವ್ಯವಸ್ಥೆಯನ್ನು ಹೊಂದಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಪರೀಕ್ಷಾ ತಯಾರಿಗಳನ್ನು ಮಾಡಬೇಕು. ಕರ್ನಾಟಕ ರಾಜ್ಯದ್ದು ದೇಶಕ್ಕೆ ಮಾದರಿಯಾದ ಡಿಜಿಟಲ್ ಲೈಬ್ರರಿ ವ್ಯವಸ್ಥೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಯಶಸ್ಸು ಪಡೆಯಲು ಪ್ರಚಲಿತ ವಿದ್ಯಾಮಾನಗಳ ಅರಿವು ಬಹಳಷ್ಟು ಅಗತ್ಯವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಜ್ವಲ ಅಕಾಡೆಮಿ ಬೆಂಗಳೂರು ಇದರ ನಿರ್ದೇಶಕರಾದ ಮಂಜುನಾಥ ಕೆ.ಯು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಹಾಗೂ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯಾಗಾರದಲ್ಲಿ ಮಂಗಳೂರು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ರಾಘವೇಂದ್ರ ಕೆ.ವಿ., ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾದ ಗಾಯತ್ರಿ, ಕಾಲೇಜಿನ ಸ್ನಾತಕ ವಿಭಾಗದ ಸಂಯೋಜಕರಾದ ಪ್ರೊ. ವಸಂತಿ ಪಿ., ಗ್ರಂಥಪಾಲಕರಾದ ಉಮಾ, ಡಾ. ರವಿಚಂದ್ರ ನಾಯ್ಕ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಂಯೋಜಕಿ ಡಾ. ಮಾಲತಿ ಕೆ., ಐ.ಕ್ಯೂ.ಎ.ಸಿ ಸಹ ಸಂಚಾಲಕರಾದ ಡಾ. ಜ್ಯೋತಿಪ್ರಿಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪಿ.ಕೆ. ಕೃಷ್ಣ ಮತ್ತು ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಾಣಿಶ್ರೀ ಮತ್ತು ಶ್ರಾವ್ಯ ಪ್ರಾರ್ಥಿಸಿದರು. ರಂಜಿತ ಸ್ವಾಗತಿಸಿ, ಮೇಘ ವಂದಿಸಿದರು. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.