ನವದೆಹಲಿ, ಮೇ 17: ಕಳೆದ ವರ್ಷದ ಏಪ್ರಿಲ್ ನಲ್ಲಿ ಕೇರಳದ ಪಾಲಕ್ಕಾಡ್ ನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಶ್ರೀನಿವಾಸನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಸದಸ್ಯ ಸಾಹೀರ್ ಕೆ.ವಿ ಎಂಬವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ಬುಧವಾರ ಬಂಧಿಸಿದೆ. ಕೊಲೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಸಾಹೀರ್ ಕೆ.ವಿ ಪತ್ತೆಗೆ 4 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಪಾಲಕ್ಕಾಡ್ ನಲ್ಲಿ ಸಂಬಂಧಿಕರ ಮನೆಯಲ್ಲಿ ಸಾಹೀರ್ ಕೆ.ವಿ ಇರುವುದನ್ನು ಖಚಿತಪಡಿಸಿಕೊಂಡ ಎನ್.ಐ.ಎ ಈತನನ್ನು ಬಂಧಿಸಿದೆ.
ಸಾಹೀರ್ ಕೆ.ವಿ ಪಟ್ಟಾಂಬಿ ಪ್ರದೇಶದ ಪಿ.ಎಫ್.ಐ ಅಧ್ಯಕ್ಷನಾಗಿದ್ದ ಎಂದು ತನಿಖೆಯಿಂದ ತಿಳಿದಿದೆ. ಒಂದು ಸಮುದಾಯದವರಿಗೆ ಭಯೋತ್ಪಾದನೆ ಮೂಲಕ ಭೀತಿ ಸೃಷ್ಟಿಸಿ 2047 ರೊಳಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವುದು ಇವರ ಎಜೆಂಡಾವಾಗಿತ್ತು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ ಶ್ರೀನಿವಾಸನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 17 ರಂದು ಎನ್.ಐ.ಎ ಪಿ.ಎಫ್.ಐ ಸಹಿತ 59 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.