ಬೆಂಗಳೂರು, ಮೇ 1: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಅನ್ನ, ಅಕ್ಷರ, ಆರೋಗ್ಯ, ಆದಾಯ, ಅಭಿವೃದ್ಧಿ ಮತ್ತು ಅಭಯ ಎಂಬ 6 ಪ್ರಮುಖ ಅಂಶಗಳನ್ನೊಂಡಿರುವ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಇದನ್ನು ‘ಪ್ರಜಾ ಪ್ರಣಾಳಿಕೆ’ ಎಂದು ನಾಮಕರಣ ಮಾಡಿರುವ ಬಿಜೆಪಿ ಹಲವು ಭರವಸೆಗಳನ್ನು ನೀಡಿದೆ.
ಪ್ರಜಾ ಪ್ರಣಾಳಿಕೆಯಲ್ಲಿ ಏನಿದೆ? ಬಿಪಿಎಲ್ ಕುಟುಂಬಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್ ಗಳನ್ನು ಉಚಿತವಾಗಿ ವಿತರಣೆ, ಕೈಗೆಟಕುವ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಲು ರಾಜ್ಯದ ಪ್ರತಿ ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ ‘ಅಟಲ್ ಆಹಾರ ಕೇಂದ್ರ’ ಸ್ಥಾಪನೆ, ‘ಪೋಷಣೆ’ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು ೫ ಕೆಜಿ ಶ್ರೀ ಅನ್ನ-ಸಿರಿಧಾನ್ಯ’ ಒಳಗೊಂಡ ಪಡಿತರ ಕಿಟ್, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ, ನಿವೇಶನ/ ವಸತಿ ರಹಿತರಿಗೆ 10 ಲಕ್ಷ ವಸತಿ ನಿವೇಶನ ಹಂಚಿಕೆ, ‘ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ’, ಸರ್ಕಾರಿ ಶಾಲೆ ಮೇಲ್ದರ್ಜೆ, ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರುಗಳಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಂದಾಯ ಸಚಿವ ಆರ್. ಅಶೋಕ್, ಅರವಿಂದ ಲಿಂಬಾವಳಿ ಮುಂತಾದವರು ಉಪಸ್ಥಿತರಿದ್ದರು.