ಕುಂದಾಪುರ, ಏ. 7: ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳಾಡಿ ಪ್ರದೇಶದ ಶ್ರೀ ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ, ಸ್ಥಳೀಯರು ‘ಅಕ್ಕ-ತಂಗಿ ಕಲ್ಲು’ ಎಂದು ಕರೆಯುವ ಹೊಯ್ಸಳ ರಾಣಿ ಹಾಗೂ ಆಳುಪ ರಾಜ ಮನೆತನದ ಚಿಕ್ಕಾಯಿ ತಾಯಿಗೆ ಸೇರಿರುವ ಎರಡು ಶಾಸನಗಳನ್ನು ಪ್ಲೀಚ್ ಇಂಡಿಯಾ ಫೌಂಡೇಶನ್-ಹೈದರಾಬಾದ್ ಇಲ್ಲಿನ ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿದ್ದಾರೆ.
ಈ ಎರಡೂ ಶಾಸನಗಳು ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿವೆ. ಇದರಲ್ಲಿ ಒಂದು ಶಾಸನವು ಕನ್ನಡ ಲಿಪಿ ಮತ್ತು ಭಾಷೆಯ 24 ಸಾಲುಗಳನ್ನು ಹೊಂದಿದ್ದು, ಕೆಲವೊಂದು ಅಕ್ಷರಗಳು ತ್ರುಟಿತಗೊಂಡಿದೆ. ಶಾಸನದ ಮೇಲ್ಪಟ್ಟಿಕೆಯಲ್ಲಿ ಶಿವಲಿಂಗವಿದ್ದು, ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ, ರಾಜಕತ್ತಿ, ನಂದಾದೀಪ ಮತ್ತು ದನ-ಕರುವಿನ ಉಬ್ಬು ಕೆತ್ತನೆಯಿದೆ.
ಶಕವರ್ಷ 1268 ವ್ಯಯ ಸಂವತ್ಸರದ ಪುಷ್ಯ ಶುದ್ಧ 15 ಧನು ಮಾಸ ಗುರುವಾರ ಅಂದರೆ ಸಾಮಾನ್ಯ ವರ್ಷ 1347 ಜನವರಿ 7ರ ಕಾಲಮಾನದ ಈ ಶಾಸನವು ಚಿಕ್ಕಾಯಿಯನ್ನು ‘ಶ್ರೀಮತ್ಪಾಂಡ್ಯ ಚಕ್ರವರ್ತಿ, ಅರಿರಾಯ ಬಸವಶಂಕರ, ರಾಯಗಜಾಂಕುಸ’ ಎಂಬ ಬಿರುದುಗಳಿಂದ ಉಲ್ಲೇಖಿಸಿದ್ದು ಮಾತ್ರವಲ್ಲದೇ ‘ಹೊಯ್ಸಳ ವೀರ ಬಲ್ಲಾಳದೇವರ ಪಟ್ಟದ ಪಿರಿಯರಸಿ’ ಎಂದು ಪ್ರಸ್ತಾಪಿಸಿದೆ. ಚಿಕ್ಕಾಯಿ, ಮಹಾಪ್ರಧಾನ ವೈಯಿಜಪ್ಪ ದಂಡನಾಯಕ, ಅಜ್ಜಂಣ ಸಾಹಣಿ, ಎರಡು ಕೊಲ ಬಳಿಯವರು ಮತ್ತು ಸಮಸ್ತ ಪ್ರಧಾನರು ಈ ಐವರು ಮೊದಲಾಗಿ ಗುಳ್ಳ ಹಾಡಿಯ (ಪ್ರಸ್ತುತ ಗುಳ್ಳಾಡಿ) ಚಿತ್ತಾರಿಯ ದೇವಾಲಯಕ್ಕೆ15 ಹೊಂನನ್ನು ದಾನ ನೀಡಿರುವ ಬಗ್ಗೆ ಈ ಶಾಸನವು ತಿಳಿಸುತ್ತದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.
ಬಹುತೇಕ ತ್ರುಟಿತಗೊಂಡಿರುವ ಇನ್ನೊಂದು ಶಾಸನವು ಸಹ ಕೆತ್ತನೆಯಲ್ಲಿ ಮೊದಲಿನ ಶಾಸನದ ತದ್ರೂಪದಂತೆ ಕಾಣುವುದರಿಂದ ಸ್ಥಳೀಯರು ಇದನ್ನು ಅಕ್ಕ-ತಂಗಿ ಕಲ್ಲು ಎಂದು ಕರೆದುಕೊಂಡು ಬಂದಿರುವುದು ವಾಡಿಕೆಯಾಗಿರಬಹುದು. ಈ ಶಾಸನದಲ್ಲಿಯು ಸಹ ಚಿಕ್ಕಾಯಿ ತಾಯಿಯನ್ನು ಮೊದಲಿನ ಶಾಸನದಲ್ಲಿರುವ ಬಿರುದುಗಳಿಂದಲೇ ಉಲ್ಲೇಖಿಸಿರುವುದನ್ನು ಕಾಣಬಹುದು. ಕ್ಷೇತ್ರಕಾರ್ಯ ಶೋಧನೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಎಸ್.ಎ. ಕೃಷ್ಣಯ್ಯ, ಹವ್ಯಾಸಿ ಇತಿಹಾಸ ಸಂಶೋಧಕ ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ, ಶ್ರೀ ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಾಲಯದ ಮುಖ್ಯಸ್ಥರಾದ ಸತೀಶ್ ಶೆಟ್ಟಿ ಹಾಗೂ ಸ್ಥಳೀಯರಾದ ಧನರಾಜ್ ಬೇಳೂರು ಮತ್ತು ಮಹೇಶ್ ಗುಳ್ಳಾಡಿ ಅವರು ಸಹಕಾರ ನೀಡಿರುತ್ತಾರೆ.