ಮಣಿಪಾಲ, ಮಾ. 9: ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಮೂತ್ರಪಿಂಡ ಆರೋಗ್ಯದ ಕುರಿತು ಜಾಗೃತಿ ಹಾಗೂ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿದ್ದ ಕೆ.ಎಂ.ಸಿ ಮಣಿಪಾಲ ಡೀನ್ ಡಾ. ಪದ್ಮರಾಜ ಹೆಗ್ಡೆ ಇವರು ವಿಶೇಷ ಮೂತ್ರಪಿಂಡ ಹೆಲ್ತ್ ಚೆಕ್ ಪ್ಯಾಕೇಜ್ ಗಳನ್ನು ಬಿಡುಗಡೆ ಮಾಡಿದರು.
ಗೌರವ ಅಥಿತಿಯಾಗಿದ್ದ ಮಣಿಪಾಲ್ ಕಾಲೇಜು ಆಫ್ ಹೆಲ್ತ್ ಪ್ರೊಫೆಷನ್ ಡೀನ್ ಡಾ. ಜಿ ಅರುಣ್ ಮಯ್ಯ ಇವರು ಮಾತನಾಡುತ್ತಾ, ಮೂತ್ರಪಿಂಡದ ಕಾಯಿಲೆಗೆ ಮಧುಮೇಹವು ಸಾಮಾನ್ಯ ಕಾರಣವಾಗಿದೆ. ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎರಡೂ, ಹೃದ್ರೋಗ ಮತ್ತು ಸ್ಥೂಲಕಾಯತೆಯು ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗುವ ಹಾನಿಗೆ ಕಾರಣವಾಗಬಹುದು. ಮೂತ್ರನಾಳದ ಸಮಸ್ಯೆಗಳು ಮತ್ತು ಮೂತ್ರಪಿಂಡದ ವಿವಿಧ ಭಾಗಗಳಲ್ಲಿ ಉರಿಯೂತವು ದೀರ್ಘಾವಧಿಯ ಮೂತ್ರಪಿಂಡ ತೊಂದರೆಗೆ ಕಾರಣವಾಗಬಹುದು. ಇದರಿಂದ ಮುಂದೆ ಬೇರೆ ಬೇರೆ ಅಂಗಗಳಿಗೆ ತೊಂದರೆ ಆಗಬಹುದು.
ಮೂತ್ರಪಿಂಡ ಸೇರಿದಂತೆ ಬೇರೆ ಬೇರೆ ಕಾಯಿಲೆಗಳ ಅರಿವು ಮೂಡಿಸಲು ಆಸ್ಪತ್ರೆಯಲ್ಲಿ ಈ ತರಹದ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ವರ್ಷಕೊಮ್ಮೆಯಾದರೂ ಮೂತ್ರಪಿಂಡ ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿಯೇ ಇಂದು ಮೂತ್ರಪಿಂಡ ಹೆಲ್ತ್ ಚೆಕ್ ಪ್ಯಾಕೇಜ್ ಗಳನ್ನು ಪರಿಚಯಿಸಲಾಗಿದೆ ಎಂದರು. ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ. ಶಂಕರ್ ಪ್ರಸಾದ್ ಎನ್ ಅವರು, ಪ್ರತೀ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರ ವಿಶ್ವ ಮೂತ್ರಪಿಂಡ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರ ಉದ್ದೇಶ ಸಾರ್ವಜನಿಕರಿಗೆ ಮೂತ್ರಪಿಂಡ ಆರೋಗ್ಯದ ಕುರಿತು ಅರಿವು ಮತ್ತು ಜಾಗೃತಿ ಶಿಕ್ಷಣ ಕೊಡುವುದು ಆಗಿದೆ. ಪ್ರತೀ ವರ್ಷ ವಿಧ ವಿಧದ ವಿಷಯಗಳಿಂದೆ ಜನರಿಗೆ ಅರಿವು ಮೂಡಿಸಲಾಗುವುದು. ಈ ವರ್ಷದ ಘೋಷ ವಾಕ್ಯ “ಅನಿರೀಕ್ಷಿತ ಘಟನೆಗಳಿಗೆ ತಯಾರಿ ಮತ್ತು ದುರ್ಬಲ ಸಮುದಾಯಕ್ಕೆ ಬೆಂಬಲ”.
ಬಹಳ ಮುಖ್ಯವಾಗಿ ನಮ್ಮಲ್ಲಿ ಮೂತ್ರಪಿಂಡ ರೋಗಿಗಳಿಗೆ ಮೂತ್ರಪಿಂಡ ಕಸಿ ಸೇರಿದಂತೆ ಎಲ್ಲಾ ಅವಶ್ಯ ಚಿಕಿತ್ಸೆ ಒಂದೇ ಸೂರಿನಡಿ ದೊರೆಯುತ್ತದೆ ಎಂದು ಹೇಳಿದರು. ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕರಾದ ಡಾ ರವೀಂದ್ರ ಪ್ರಭು ಎ ಸ್ವಾಗತಿಸಿ, ಮಕ್ಕಳ ಮೂತ್ರಪಿಂಡ ತಜ್ಞರಾದ ಡಾ. ದರ್ಶನ್ ರಂಗಸ್ವಾಮಿ ವಂದಿಸಿದರು. ಡಾ. ಶ್ರೀನಿವಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.