ಮಲ್ಪೆ, ಫೆ. 13: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯೂಎಸಿ ಮತ್ತು ಭಾರತ ಸರಕಾರದ ನೆಹರೂ ಯುವ ಕೇಂದ್ರ ಉಡುಪಿ ಹಾಗೂ ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಕೌಶಲ, ವೃತ್ತಿ ಮಾರ್ಗದರ್ಶನ ಹಾಗೂ ಒತ್ತಡ ನಿರ್ವಹಣೆ ಕುರಿತಾದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಕಾರ್ಯಗಾರ ನಡೆಯಿತು. ಕಾರ್ಯಗಾರಕ್ಕೆ ಚಾಲನೆಯಿತ್ತ ತೆಂಕನಿಡಿಯೂರು ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಕೃಷ್ಣಾನಂದ ಮಲ್ಪೆ ಮಾತನಾಡುತ್ತಾ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯುವ ಕೌಶಲಗಳನ್ನು ವಿದ್ಯಾರ್ಥಿಗಳು ರೂಪಿಸಿಕೊಂಡಾಗ ಮಾತ್ರ ಭವಿಷ್ಯ ಉಜ್ವಲವಾಗಬಲ್ಲದೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ ಮಾತನಾಡಿ, ನೂತನ ಶಿಕ್ಷಣ ನೀತಿ ಉನ್ನತ ಶಿಕ್ಷಣದಲ್ಲಿ ಕೌಶಲಗಳಿಗೆ ಆದ್ಯತೆ ನೀಡಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆಯಿತ್ತರು. ನೆಹರೂ ಯುವ ಕೇಂದ್ರ ಉಡುಪಿ ಜಿಲ್ಲಾ ಯೂತ್ ಆಫಿಸರ್ ವಿಲ್ಫ್ರೆಡ್ ಡಿ’ಸೋಜಾ ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯಕ್ರಮದ ಔಚಿತ್ಯ ತಿಳಿಸಿದರು. ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದು ಶುಭ ಹಾರೈಸಿದರು.
ರಾಜಕೀಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರಶಾಂತ ನೀಲಾವರ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಉಮೇಶ್ ಪೈ ವಂದಿಸಿದರು. ಕನ್ನಡ ಸಹ ಪ್ರಾಧ್ಯಾಪಕ ಡಾ. ವೆಂಕಟೇಶ್ ಹೆಚ್.ಕೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಗಾರದಲ್ಲಿ ಮಧ್ವ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ಸಿ.ಕೆ. ಮಂಜುನಾಥ ವಾಣಿಜ್ಯಶಾಸ್ತ್ರ ಮತ್ತು ಸಮಾಜ ವಿಜ್ಞಾನ ವಿಭಾಗಗಳಲ್ಲಿ ವೃತ್ತಿ ಭವಿಷ್ಯ ಕುರಿತಾಗಿ ವಿಚಾರ ಮಂಡಿಸಿದರು. ಹೆಬ್ರಿ ಸರಕಾರಿ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಬಾಲರಾಜ್ ಹಾಗೂ ವಿಘ್ನೇಶ್ವರ ರಾವ್ ಕೌಶಲಗಳು ಮತ್ತು ಅನ್‌ಲೈನ್ ಕೋರ್ಸ್ಗಳ ಕುರಿತಾಗಿ ವಿವರವಾದ ಮಾಹಿತಿ ನೀಡಿದರೆ, ಮಣಿಪಾಲ ಅಕಾಡೆಮಿ ಸಹಾಯಕ ಪ್ರಾಧ್ಯಾಪಕರಾದ ಸ್ವೀಟಿ ಫೆರ್ನಾಂಡೀಸ್ ವಿದ್ಯಾರ್ಥಿ ಜೀವನ ಮತ್ತು ವೃತ್ತಿಯಲ್ಲಿ ಒತ್ತಡ ನಿರ್ವಹಣೆಯ ಮಾರ್ಗಸೂಚಿಗಳನ್ನು ತಿಳಿಸಿದರು. ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಜೊತೆಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನೂ ಒಳಗೊಂಡು ಒಟ್ಟು 120 ಮಂದಿ ಕಾರ್ಯಾಗಾರದ ಪ್ರಯೋಜನ ಪಡೆದರು. ಬೋಧಕ, ಬೋಧಕೇತರ ವೃಂದದವರು ಸಹಕರಿಸಿದರು.