ಉಡುಪಿ: (ಉಡುಪಿ ಬುಲೆಟಿನ್ ವಿಶೇಷ ವರದಿ) ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆ ಬಳಿ ಸೋಮವಾರ ದಿಢೀರನೇ ಸವಾರರು ಆಮೆಗತಿಯಲ್ಲಿ ಸಂಚರಿಸುವ ದೃಶ್ಯಗಳು ಕಂಡುಬಂದವು. ಸರ್ವಿಸ್ ರಸ್ತೆಯಲ್ಲೇ ಸಂಚರಿಸಬೇಕಾದ ಕಾರಣ ವಾಹನ ದಟ್ಟಣೆ ಸಾಮಾನ್ಯವಾಗಿತ್ತು.
ಕಲ್ಯಾಣಪುರ, ನೇಜಾರು, ಕೆಮ್ಮಣ್ಣು, ಹೂಡೆ, ತೆಂಕನಿಡಿಯೂರು, ಗರಡಿಮಜಲು, ಗೋಪಾಲಪುರ, ಲಕ್ಷ್ಮೀನಗರ, ನಯಂಪಳ್ಳಿ, ತೋನ್ಸೆ ಇತ್ಯಾದಿ ಕಡೆಗಳಿಂದ ಪ್ರತಿನಿತ್ಯ ಸಾವಿರಾರು ಮಂದಿ ವಿದ್ಯಾರ್ಥಿಗಳು, ಉದ್ಯೋಗಿಗಳು ಸಂತೆಕಟ್ಟೆ ಜಂಕ್ಷನ್ ಮೂಲಕ ಸಂಚರಿಸಬೇಕಾದರಿಂದ ಇಲ್ಲಿ ದಿನನಿತ್ಯ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ.
ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುವುದರಿಂದ ಕಿಮೀಗಟ್ಟಲೆ ವಾಹನಗಳ ಸಾಲು ಕಂಡುಬರುತ್ತಿದ್ದ ಕಾರಣ ಸಂತೆಕಟ್ಟೆಯಲ್ಲೊಂದು ಅಂಡರ್ ಪಾಸ್ (ಕಿನ್ನಿಮೂಲ್ಕಿ ಮಾದರಿಯಲ್ಲಿ) ನಿರ್ಮಾಣವಾಗಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿತ್ತು.
ಇದಕ್ಕೆ ಸಂಬಂಧಿಸಿದಂತೆ ಹಲವಾರು ಸಭೆಗಳು, ಚರ್ಚೆಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆಯಾಗಿತ್ತು. ಇದೀಗ ಅಂಡರ್ ಪಾಸ್ ನಿರ್ಮಿಸಲು ಕಾಲ ಕೂಡಿ ಬಂದಿದೆ ಎಂದು ಹೇಳಿದರೆ ತಪ್ಪಾಗಲಾರದು. ಸೋಮವಾರ ಕಾಮಗಾರಿಗೆ ಸಂಬಂಧಿಸಿದ ಯಂತ್ರಗಳು ಬಂದು ನಿಂತಿದ್ದು, ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ತಡೆದು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಪೊಲೀಸರು ಸಹಕರಿಸುತ್ತಿದ್ದರು.
ಈ ಬಗ್ಗೆ ‘ಉಡುಪಿ ಬುಲೆಟಿನ್’ ಜತೆಗೆ ಮಾತನಾಡಿದ ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ದಿನೇಶ್ ಪೈ, ಹೆದ್ದಾರಿ ಪ್ರಾಧಿಕಾರದವರು ಹೇಳಿದ ಪ್ರಕಾರ ಸಂತೆಕಟ್ಟೆ ಜಂಕ್ಷನ್ ನಿಂದ ಎಲ್.ವಿ.ಟಿ ವರೆಗೆ 22 ಅಡಿ ಅಂಡರ್ ಪಾಸ್ ಕಾಮಗಾರಿ ನಡೆಯಲಿದ್ದು, ವಾಹನಗಳು ನೇರವಾಗಿ ಹೆದ್ದಾರಿ ಮೂಲಕ ಕಿನ್ನಿಮೂಲ್ಕಿ ಮಾದರಿಯಲ್ಲಿ ಸಂಚರಿಸಲಿವೆ ಎನ್ನಲಾಗಿದೆ. ಆದರೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ಕಾಮಗಾರಿಯ ಸಂಪೂರ್ಣ ಬ್ಲೂಪ್ರಿಂಟ್ ನಗರಸಭೆಯ ಮುಂದಿಡಬೇಕು ಎಂದು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ಆಗಬೇಕು. ಒಂದು ವರ್ಷದ ಒಳಗೆ ಬಿಟ್ಟುಕೊಡಬೇಕು. ಸಂತೆಕಟ್ಟೆಯಲ್ಲಿ ಕರಾವಳಿ ಜಂಕ್ಷನ್ ಮಾದರಿಯ ಕಾಮಗಾರಿ ಬೇಡ. ಅದನ್ನು ನಾವೆಲ್ಲರೂ ವಿರೋಧಿಸುತ್ತೇವೆ. ಏಕೆಂದರೆ ಸಂತೆಕಟ್ಟೆಯಲ್ಲಿ ಹಳೆಯ ಸಂತೆ ಮಾರುಕಟ್ಟೆಯಲ್ಲಿ ನಗರಸಭೆಯ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ. ಅದಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಎರಡೂ ಕಡೆಯಲ್ಲಿ ಜನಸಂಚಾರ ಇರುವ ಹಾಗೆ ಕಿನ್ನಿಮೂಲ್ಕಿ ಮಾದರಿಯ ಅಂಡರ್ ಪಾಸ್ ನಡೆಯುವ ಬಗ್ಗೆ ಭರವಸೆ ನೀಡಲಾಗಿದೆ. ಆದರೆ ಕಾಮಗಾರಿಯ ಬಗ್ಗೆ ಬ್ಲೂ ಪ್ರಿಂಟ್ ನ್ನು ನಗರಸಭೆಗೆ ಸಲ್ಲಿಸಿದ ನಂತರವೇ ಕಾಮಗಾರಿಯ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ದಿನೇಶ್ ಪೈ ಹೇಳಿದ್ದಾರೆ.
ವಿಳಂಬ ಆಗದಿರಲಿ: ಪಂಪ್ವೆಲ್ ಮತ್ತು ಕುಂದಾಪುರದಲ್ಲಿ ವರ್ಷಗಳ ಕಾಲ ಕಾಮಗಾರಿ ನಡೆಯದೇ ಕುಂಟುತ್ತಾ ಸಾಗಿದ ಹಾಗೆ ಸಂತೆಕಟ್ಟೆಯಲ್ಲಿಯೂ ನಡೆಯದಿರಲಿ. ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ಹಾಗೆ ಕಾಮಗಾರಿ ವೈಜ್ಞಾನಿಕವಾಗಿ ನಡೆಯಲಿ.