ಲಂಡನ್: ಯುನೈಟೆಡ್ ಕಿಂಗ್ಡಮ್ ಇದರ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಸೋಮವಾರ ಆಯ್ಕೆಯಾದರು. ಸುನಕ್ ಯುಕೆಯ 57 ನೇ ಪ್ರಧಾನ ಮಂತ್ರಿ.
ಮೊದಲ ಹಿಂದೂ ಪ್ರಧಾನಮಂತ್ರಿ: ಯುನೈಟೆಡ್ ಕಿಂಗ್ಡಮ್ ನ ಮೊದಲ ಹಿಂದೂ ಪ್ರಧಾನಿಯಾಗಿ 42 ರ ಹರೆಯದ ರಿಷಿ ಸುನಕ್ ನೂತನ ಇತಿಹಾಸ ನಿರ್ಮಿಸಿದರು. 2015ರಲ್ಲಿ ರಿಷಿ ಸುನಕ್ ಬ್ರಿಟನ್ ಸಂಸತ್ತನ್ನು ಪ್ರವೇಶಿಸಿದರು. 2020ರಲ್ಲಿ ಬ್ರಿಟನ್ ಹಣಕಾಸು ಸಚಿವರಾಗಿ ಈ ಹುದ್ದೆಗೇರಿದ ಭಾರತ ಮೂಲದ ಮೊದಲ ವ್ಯಕ್ತಿಯಾಗಿದ್ದಾರೆ. ಸಂಸದರಾಗಿ ರಿಷಿ ಸುನಕ್ ಭಗವದ್ಗೀತೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಸುನಕ್ ಅವರು ಪ್ರತಿಷ್ಠಿತ ವಿಂಚೆಸ್ಟರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಆಕ್ಸ್‌ಫರ್ಡ್ ವಿವಿಯಲ್ಲಿ ರಾಜಕೀಯ ಪದವಿ, ಫಿಲಾಸಫಿ ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಅಮೆರಿಕಾ ಸ್ಟಾನ್‌ಫರ್ಡ್ ವಿವಿಯಿಂದ ಎಂಬಿಎ ಪದವಿಯನ್ನೂ ಪಡೆದುಕೊಂಡಿರುವ ರಿಷಿ ಸುನಕ್ ಇನ್ಫೋಸಿಸ್ ನಾರಾಯಣಮೂರ್ತಿಯವರ ಅಳಿಯ.
ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾರನ್ನು ರಿಷಿ ಸುನಾಕ್ ವಿವಾಹವಾಗಿದ್ದಾರೆ. ಇವರಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಕಿರಿಯ ಪ್ರಧಾನಿ: 200 ವರ್ಷದ ಇತಿಹಾಸದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಪ್ರಧಾನಿ ಎಂಬ ಮತ್ತೊಂದು ಇತಿಹಾಸವನ್ನು ರಿಷಿ ಸುನಕ್ ನಿರ್ಮಿಸಿದ್ದಾರೆ.