ಟೋಕ್ಯೊ: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆಯನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಇಂದು ನಾರಾ ಎಂಬಲ್ಲಿ ಅವರು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಅಬೆಯನ್ನು ಹತ್ಯೆ ಮಾಡಲಾಗಿದೆ. ಶಿಂಜೊ ಅಬೆ (67) ಭಾಷಣ ಮಾಡುತ್ತಿದ್ದಾಗ ಗುಂಡೇಟಿಗೆ ಕುಸಿದುಬಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆ ತೀವ್ರ ರಕ್ತಸ್ರಾವವಾಗಿತ್ತು.
ಪ್ರಧಾನಿ ಮೋದಿ ಸಂತಾಪ: ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರಾದ ಶಿಂಜೋ ಅಬೆ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಅತ್ಯುನ್ನತ ಜಾಗತಿಕ ರಾಜಕಾರಣಿ, ಅತ್ಯುತ್ತಮ ನಾಯಕ ಮತ್ತು ಉತ್ತಮ ಆಡಳಿತಗಾರರಾಗಿದ್ದರು. ಜಪಾನ್ ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅಬೆ ಅವರೊಂದಿಗಿನ ನನ್ನ ಒಡನಾಟವು ಹಲವು ವರ್ಷಗಳ ಹಿಂದಿನದು. ನಾನು ಗುಜರಾತ್ ಸಿಎಂ ಆಗಿದ್ದಾಗ ಅವರನ್ನು ಪರಿಚಯ ಮಾಡಿಕೊಂಡಿದ್ದೆ ಮತ್ತು ನಾನು ಪ್ರಧಾನಿಯಾದ ನಂತರ ನಮ್ಮ ಸ್ನೇಹ ಮುಂದುವರೆಯಿತು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರ ತೀಕ್ಷ್ಣ ಒಳನೋಟಗಳು ಯಾವಾಗಲೂ ನನ್ನ ಮೇಲೆ ಆಳವಾದ ಪ್ರಭಾವ ಬೀರಿದವು. ಭಾರತ-ಜಪಾನ್ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ಅಬೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಶಿಂಜೋ ಅಬೆ ನಿಧನಕ್ಕೆ ಜುಲೈ 9 ರಂದು ಭಾರತ ಒಂದು ದಿನದ ಶೋಕಾಚರಣೆ ನಡೆಸಲಿದೆ.