ಉಡುಪಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ನೇತ್ರಾವತಿ ವಲಯ ಉಡುಪಿ ಜಿಲ್ಲೆ ಇದರ ವತಿಯಿಂದ ಬಿಲ್ಲವ ಸೇವಾ ಸಂಘ (ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಆಶ್ರಯದಲ್ಲಿ ಆರೋಗ್ಯ ಸಂರಕ್ಷಣೆ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಶಿಬಿರದ ಉದ್ಘಾಟನಾ ಸಮಾರಂಭವು ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಜರಗಿತು.
ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ರವರು ಯೋಗ ಶಿಕ್ಷಣ ತರಬೇತಿ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಇಂದಿನ ಒತ್ತಡಗಳ ನಡುವಿನ ಯಾಂತ್ರೀಕೃತ ಬದುಕಿನಲ್ಲಿ ಆರೋಗ್ಯಪೂರ್ಣ ಮತ್ತು ನೆಮ್ಮದಿಯ ಜೀವನಕ್ಕೆ ಯೋಗ ಶಿಕ್ಷಣವೊಂದೇ ರಹದಾರಿಯಾಗಿದೆ ಎಂದು ತಿಳಿಸಿದರು.
ಸಂಘದ ಸಮುದಾಯ ಭವನದಲ್ಲಿ ಪ್ರತೀ ದಿನ ಮುಂಜಾನೆ 5.00ರಿಂದ 6.30ರ ತನಕ 48 ದಿನಗಳ ಕಾಲ ನಡೆಯುವ ಉಚಿತ ಯೋಗ ಶಿಕ್ಷಣ ಶಿಬಿರದಲ್ಲಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕ ಬಂಧುಗಳು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ ಲಭ್ಯವಿರುವ ಅವಕಾಶದ ಸದುಪಯೋಗವನ್ನು ಪಡೆದು ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ಇದರ ಉಡುಪಿ ಜಿಲ್ಲಾ ಮಹಿಳಾ ಸಂಚಾಲಕಿ ಭವಾನಿ ಭಟ್ ರವರು ಮಾತನಾಡಿ, ಸಂಸ್ಕಾರ, ಸಂಘಟನೆ, ಸೇವೆ ಎಂಬ ತತ್ವದಡಿ ಉಚಿತ ಯೋಗ ಶಿಕ್ಷಣವನ್ನು ನೀಡುತ್ತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸ್ಥೂಲ ಪರಿಚಯದೊಂದಿಗೆ ಜೀವನದಲ್ಲಿ ನಿರಂತರ ಯೋಗಾಭ್ಯಾಸದ ಔಚಿತ್ಯವನ್ನು ವಿವರಿಸಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ಇದರ ಉಡುಪಿ ಜಿಲ್ಲಾ ಸಂಚಾಲಕ ಯೋಗ ಶಿಕ್ಷಕ ಹಾಗೂ ಉಪನ್ಯಾಸಕ ಚಂದ್ರಶೇಖರ ಬಿ.ಎಮ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಯಂ ಆರೋಗ್ಯ ಸಂರಕ್ಷಣೆಯಲ್ಲಿ ಯೋಗ ಶಿಕ್ಷಣದ ಮಹತ್ವ, ಪ್ರಾಕಾರಗಳು ಹಾಗೂ ಉಪಯೋಗದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ್ ಎ. ಮತ್ತು ಮಹಿಳಾ ಘಟಕದ ಸಂಚಾಲಕಿ ವಿಜಯಾ ಜಿ. ಬಂಗೇರ ರವರು ಶುಭಾಂಶನೆಗೈದರು.
ಈಗಾಗಲೇ ಯೋಗ ಶಿಕ್ಷಣವನ್ನು ಪಡೆದು ಆರೋಗ್ಯಪೂರ್ಣ ಜೀವನವನ್ನು ನಡೆಸುತ್ತಿರುವ ಹಲವಾರು ಯೋಗ ಬಂಧುಗಳು ತಮ್ಮ ಸ್ವಯಂ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕರು, ಸಂಘದ ಆಡಳಿತ ಸಮಿತಿ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಸಂಘದ ಸದಸ್ಯರು, ಯೋಗ ಬಂಧುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಯೋಗ ಶಿಕ್ಷಕಿ ನಳಿನಿ ಸ್ವಾಗತಿಸಿ, ಯೋಗ ಬಂಧು ಅಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಲಯ ಶಿಕ್ಷಣ ಪ್ರಮುಖ್ ಆರ್.ಜಿ. ಬಿರಾದರ್ ಸೂಚನೆಗಳನ್ನು ನೀಡಿ ವಂದಿಸಿದರು.