ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟತಟ್ಟು ಪಡುಕರೆ ಇದರ ಇಕೋ ಕ್ಲಬ್ ವತಿಯಿಂದ ಪರಿಸರ ಜಾಗೃತಿ ಮಾಹಿತಿ ಕಾರ್ಯಾಗಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ. ರಾಜಾರಾಮ್ ಐತಾಳ್ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿ ಪರಿಸರ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲ ಆದ್ಯ ಕರ್ತವ್ಯ, ಈ ನಿಟ್ಟಿನಲ್ಲಿ ಪರಿಸರಕ್ಕೆ ಹಾನಿಕರವಾದ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಎಸೆಯುವ ಕೈಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯತೆಯನ್ನು ಮನವರಿಕೆಮಾಡಿಕೊಟ್ಟರು.
ವಿದ್ಯಾರ್ಥಿಗಳು ಮನೆಯ ಹಿತ್ತಲಲ್ಲಿ ಗಿಡನೆಟ್ಟು ಪೋಷಿಸುವ ಕೆಲಸ ನಿರಂತವಾಗಿ ಮಾಡಬೇಕು ಆ ಮೂಲಕ ಪ್ರಾಕೃತಿಕ ಸಮತೋಲನ ಸೃಷ್ಠಿಸಲು ಸಾಧ್ಯವಾಗುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಆಗುತ್ತಿರುವ ಪ್ರಾಕೃತಿಕ ಅಸಮತೋಲನ ಬಗ್ಗೆ ತಿಳಿಹೇಳಿದರಲ್ಲದೆ, ಪರಿಸರಿಂದ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡುವ ಕಾಯಕಕ್ಕೆ ಕೈಜೋಡಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಜಾನಕಿ ವಹಿಸಿದ್ದರು.
ಗೌರವ ಶಿಕ್ಷಕಿಯರಾದ ಶೈಲಜಾ, ಪ್ರಣೀತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಇಕೋ ಕ್ಲಬ್ ನೋಡಲ್ ಅಧಿಕಾರಿ ಶಿಕ್ಷಕ ಗಣೇಶ್ ಆಚಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸಂಗೀತ ಸ್ವಾಗತಿಸಿ, ಲಕ್ಷ್ಮಣ ಸುವರ್ಣ ವಂದಿಸಿದರು. ಶಿಕ್ಷಕ ಅರವಿಂದ ಕಾರ್ಯಕ್ರಮ ನಿರೂಪಿಸಿದರು.