ಕೋಟ: ಕೊರೊನಾ ಸಂಕಷ್ಟ ದಿನಗಳಲ್ಲಿ ಯಕ್ಷ ಕಲಾವಿದರ ಸ್ಥಿತಿ ಶೋಚನೀವಾಗಿದೆ. ಇದನ್ನು ಮನಗಂಡ ಸರಕಾರ ಕಲಾವಿದರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗದಂತೆ ಮುಂಜಾಗೃತೆ ವಹಿಸುತ್ತಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟದ ಯಕ್ಷ ಸುಮನಸ ಹವ್ಯಾಸಿ ಕಲಾರಂಗ ಇದರ ೪ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಕ್ಷಗಾನ ಸಂಸ್ಕೃತಿಯ ಅನಾವರಣದ ಜೊತೆ ಜೀವನಾಡಿ ಕಲೆಯಾಗಿ ತೆಂಕು, ಬಡಗು, ನಡು ತಿಟ್ಟುಗಳ ಮೂಲಕ ವೈಶಿಷ್ಟ್ಯಪೂರ್ಣ ಕಲೆಯಾಗಿ ವಿಶ್ವದಾದ್ಯಂತ ಪಸರಿಸಿಕೊಂಡಿದೆ. ಯಕ್ಷಗಾನ ಕಲೆ ಮನೋರಂಜನೆಗೆ ಸೀಮಿತವಾಗದೆ ಸಂಸ್ಕಾರ ಬಿತ್ತುವ ತೋರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದ ಯಕ್ಷ ಚಿಂತಕ, ಪ್ರಸಂಗಕರ್ತ ಪವನ್ ಕಿರಣ್ಕೆರೆ ಮಾತನಾಡಿ, ಕಲೆಯು ಎಲ್ಲರಿಗೂ ಒಲಿಯುವುದಿಲ್ಲ, ಬದಲಾಗಿ ಅದು ಒಲಿಯಬೇಕಾದರೆ ಶ್ರದ್ಧೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಹವ್ಯಾಸಿ ಯಕ್ಷ ಕಲಾವಿದರ ಸಾಧನೆ ಪ್ರಶಂಸನೀಯ ಎಂದರಲ್ಲದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೋಟ ಶಿವರಾಮ ಕಾರಂತರು ಯಕ್ಷಗಾನವನ್ನು ವಿಶ್ವಗಾನವಾಗಿಸಿದ ಮಹಾನ್ ಸಾಧಕರಲ್ಲಿ ಒರ್ವರು. ಅಂತಹ ಕೋಟದ ಮಣ್ಣಿನಲ್ಲಿ ಯಕ್ಷಸುಮನಸ ಅನುಭವಿ ಕಲಾವಿದರ ಜೊತೆಗೆ ಯುವ ಕಲಾವಿರಿಗೆ ಸ್ಪೂರ್ತಿಯ ನೆಲೆಯಾಗಿದೆ.
ಕೊರೊನಾ ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರ ಪರವಾಗಿ ಧ್ವನಿ ಎತ್ತಿದವರು ಕಲಾಪ್ರೇಮಿಗಳು. ಅವರ ಗಟ್ಟಿ ಧ್ವನಿಗೆ ಕಲಾವಿದರಿಗೆ ಜೀವ ತುಂಬಿದೆ. ಈ ಕರಾವಳಿಯ ಕಲೆಗೆ ಬಹುದೊಡ್ಡ ಕೊಡುಗೆ ನೀಡಿದವರಲ್ಲಿ ಇತರರ ಜೊತೆ ಕುಂದಾಪುರದವರ ಕೊಡುಗೆ ಅನನ್ಯವಾಗಿದೆ. ಅದು ಸಹ ಜಾಗತಿಕ ಮಟ್ಟದಲ್ಲಿ ಕೊಂಡ್ಯೊಯುವAತೆ ಮಾಡಿದೆ. ಯಕ್ಷಗಾನ ಕಲೆ ಮನೋರಂಜನೆಯ ಜೊತೆ ಮನೋವಿಕಾಸವನ್ನು ಹೆಚ್ಚಿಸಿದೆ.
ಒಂದು ಸಂಘಟನೆ ಕಟ್ಟುವುದು ಸುಲಭವಲ್ಲ ಅದನ್ನು ನಿರಂತವಾಗಿ ಉಳಿಸಿ ಬೆಳೆಸುವುದು ಬಹುದೊಡ್ಡ ಸವಾಲಾಗಿದೆ. ಈ ದಿಸೆಯಲ್ಲಿ ಯಕ್ಷಸುಮನಸ ಹವ್ಯಾಸಿ ತಂಡ ನಿರಂತವಾಗಿ ಜನಮಾನಸದಲ್ಲಿ ನೆಲೆಯೂರುವ ಸಂಸ್ಥೆಯಾಗಿ ಪಸರಿಸಲಿ ಎಂದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಣೂರು ಮಹಾಲಿಂಗೇಶ್ವರ ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಯಕ್ಷ ಸುಮನಸದ ಗೌರವಾಧ್ಯಕ್ಷ ಎಂ. ಸುಬ್ರಾಯ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಸುಮನಸ ಹವ್ಯಾಸಿ ಕಲಾರಂಗದ ಅಧ್ಯಕ್ಷ ಪ್ರಸಾದ್ ಬಿಲ್ಲವ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಐತಾಳ್ ನಿರೂಪಿಸಿದರು. ಯಕ್ಷ ಸುಮನಸದ ಪ್ರಶಾಂತ್ ಶೆಟ್ಟಿ ಸಹಕರಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ಕಂಸ ದಿಗ್ವಿಜಯ ಪ್ರಸಂಗ ಪ್ರದರ್ಶನಗೊಂಡಿತು.