ಶುಕ್ರ ಗ್ರಹ ದೂರ ದರ್ಶಕದಲ್ಲಿ ನೋಡಲು ಈಗ ಬಲು ಚೆಂದ. ಅದೊಂದು ಗ್ರಹ, ನಕ್ಷತ್ರವಲ್ಲ ಎಂದು ಸ್ಪಷ್ಟವಾಗುವುದೇ ಈಗ. ದೂರದರ್ಶಕದಲ್ಲಿ ಈಗ ಶುಕ್ರಗ್ರಹ (crescent venus) ಬಿದಿಗೆ ಚಂದ್ರನಂತೆ ತೋರುತ್ತದೆ.
ಯಾವಾಗಲೂ ಹೀಗೆ ಕಾಣುವುದಿಲ್ಲ. 19 ತಿಂಗಳಿಗೊಮ್ಮೆ ಸಂಜೆಯ ಆಕಾಶದಲ್ಲಿ ಈ ರೀತಿ ಗೋಚರಿಸುತ್ತದೆ. ಇದು ಕೆಲವೇ ದಿನ. ಡಿಸೆಂಬರ್ ಕೊನೆಯ ವಾರದವರೆಗೆ ಮಾತ್ರ. ತದನಂತರ ಪುನಃ ಸಂಜೆ ಆಕಾಶದಲ್ಲಿ ನೋಡಬೇಕಾದರೆ 19 ತಿಂಗಳು ಕಾಯಬೇಕು.
ಶುಕ್ರ ಗ್ರಹ, ಗುರು ಹಾಗೂ ಶನಿ ಗ್ರಹಗಳಂತೆ ರಾತ್ರಿ ಇಡೀ ಕಾಣುವುದಿಲ್ಲ. ಸುಮಾರು 8 ತಿಂಗಳು ಸಂಜೆಯ ಆಕಾಶದಲ್ಲಿ ಹೆಚ್ಚೆಂದರೆ ಎರಡೂವರೆ ಗಂಟೆ. ಆಗ ದಿಗಂತದಿಂದ ಪ್ರತೀದಿನ ಮೇಲೇರುತ್ತಾ ಹೆಚ್ಚೆಂದರೆ 47 ಡಿಗ್ರಿ ಎತ್ತರದಲ್ಲಿ ಕಂಡು ನಂತರ ಪ್ರತೀ ದಿನ ಅವಸರ ಅವಸರದಲ್ಲಿ ಕೆಳಗಿಳಿದು ಮರೆಯಾಗುವುದು. ಅದಕ್ಕೆ ಶುಕ್ರ ಅಸ್ತ ಎನ್ನುತ್ತೇವೆ. ಆಗ ಈ ಗ್ರಹ ಭೂಮಿಗೆ ಆತೀ ಸಮೀಪ ಸುಮಾರು 4.1 ಕೋಟಿ ಕಿಮೀ (ಇನ್ಫೀರಿಯರ್ ಕಂಜ್ಞ್ಂಕ್ಷನ್.).
ನಂತರ 8 ತಿಂಗಳು ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಸೂರ್ಯೋದಯಕ್ಕೆ ಮೊದಲು ಕಾಣುತ್ತದೆ. ಪುನ: ಶುಕ್ರ ಅಸ್ತ ಆಗ ಭೂಮಿಯಿಂದ 26 ಕೋಟಿ ಕಿಮೀ ದೂರದಲ್ಲಿದ್ದು ಚಿಕ್ಕದಾಗಿ ಕಾಣುತ್ತದೆ. (ಸುಪೀರಿಯರ್ ಕಂಜ್ಞ್ಂಕ್ಷನ್). ಜನವರಿ 9, 2022 ಕ್ಕೆ ಇನ್ಫೀರಿಯರ್ ಕಂಜ್ಞ್ಂಕ್ಷನ್. 2021 ಮಾರ್ಚ್ 26 ರಂದು ಸುಪೀರಿಯರ್ ಕಂಜ್ಞ್ಂಕ್ಷನ್ ಆಗಿತ್ತು.
ದೂರದರ್ಶಕದಲ್ಲಿ ಗ್ರಹಗಳು ನೋಡಲು ಬಲು ಚೆಂದ. ಗುರುಗ್ರಹ ದ ನಾಲ್ಕು ಚಂದ್ರರು ಗೆಲೀಲಿಯನ್ ಮೂನ್ಸ್, ಶನಿಗ್ರಹದ ಬಳೆ, ಚಂದ್ರನ ಗುಳಿಗಳು, ಪರ್ವತಗಳು, ಹಾಗೂ ಶುಕ್ರ ಗ್ರಹದ (phases of Venus ) ಕೃಷ್ಣ ಪಕ್ಷದ ಚಂದ್ರನಂತೆ ಕ್ಷೀಣಿಸುತ್ತಾ, ಗಾತ್ರದಲ್ಲಿ ದೊಡ್ಡದಾಗುತ್ತಾ ಕಾಣುವುದು ನೋಡಲು ಸೋಜಿಗ.
ಸೌರವ್ಯೂಹದಲ್ಲೇ ಶುಕ್ರ ಗ್ರಹ ವಿಭಿನ್ನ. ಉಳಿದೆಲ್ಲವೂ (ಯುರೇನಸ್ ಬಿಟ್ಟು) ತಮ್ಮ ಅಕ್ಷದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಪ್ರತೀ ದಿನ ತಿರುಗುತ್ತಿದ್ದರೆ ಶುಕ್ರಗ್ರಹ ಉಲ್ಟಾ. ಪೂರ್ವದಿಂದ ಪಶ್ಚಿಮಕ್ಕೆ. ಹಾಗಾಗಿ ಶುಕ್ರನಲ್ಲಿ ಸೂರ್ಯೋದಯ ಪಶ್ಚಿಮದಲ್ಲಿ, ಪೂರ್ವ ದಲ್ಲಲ್ಲ. ಯುರೇನಸ್ ಸುತ್ತುವುದು ಉತ್ತರದಿಂದ ದಕ್ಷಿಣಕ್ಕೆ.
ಬುಧ ಗ್ರಹ ಸೂರ್ಯನಿಗೆ ಅತೀ ಸಮೀಪವಿದ್ದರೂ( 6ಕೋಟಿ) ಸೂರ್ಯನಿಂದ ಸುಮಾರು 11 ಕೋಟಿ ಕಿಮೀ ದೂರದಲ್ಲಿರುವ ಶುಕ್ರನಲ್ಲಿ ಅತೀ ಹೆಚ್ಚು ಉಷ್ಣತೆ( ಸರಾಸರಿ 464 ಡಿಗ್ರಿ ಸೆಲ್ಸಿಯಸ್.) ಶುಕ್ರ, ಭೂ ಗ್ರಹದ ಅವಳಿಯೋ ಎನ್ನುವಂತೆ ಗಾತ್ರದಲ್ಲಿದ್ದರೂ, ಸೂರ್ಯನ ಸುತ್ತು ಒಂದು ಸುತ್ತು ಬರಲು 225 ದಿನಗಳು ಬೇಕಾದರೆ ತನ್ನ ಅಕ್ಷದಲ್ಲಿ ಸುತ್ತಲು 243 ದಿನಗಳು ಬೇಕು. ಶುಕ್ರನ ಒಂದು ವರ್ಷ ಅದರ ಒಂದು ದಿನಕ್ಕಿಂತ ಚಿಕ್ಕದು.
ವಿಚಿತ್ರ ವಾತಾವರಣ ಶುಕ್ರನದು. ದಟ್ಟ ಇಂಗಾಲದ ಡೈಆಕ್ಸೈಡ್ ನ ಮೋಡ ಕವಚಿ ( 95%) ಅತೀ ಹೆಚ್ಚು ವಾತಾವರಣದ ಓತ್ತಡ. ಭೂ ವಾತಾವರಣ ಓತ್ತಡಕ್ಕಿಂತ 90 ಪಟ್ಟು ಹೆಚ್ಚು. ಈಗ ಸಂಜೆ ಆಕಾಶದಲ್ಲಿ ದೂರದರ್ಶಕದಿಂದ ಗ್ರಹಗಳನ್ನು ನೋಡಲು ಸದವಕಾಶ. ಆಕಾಶ ವೀಕ್ಷಣೆಗೆ ಅತ್ಯುತ್ತಮ ಸಮಯ.
-ಡಾ. ಎ. ಪಿ ಭಟ್, ಉಡುಪಿ.