Monday, November 25, 2024
Monday, November 25, 2024

ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳ ನಿರ್ಮಾಣ ರೈತರಿಗೆ ಲಾಭದಾಯಕ: ಜಿಲ್ಲಾಧಿಕಾರಿ

ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳ ನಿರ್ಮಾಣ ರೈತರಿಗೆ ಲಾಭದಾಯಕ: ಜಿಲ್ಲಾಧಿಕಾರಿ

Date:

ಉಡುಪಿ: ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ನಿಯಮಿತವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಕೃಷಿಕರಿಗೂ ಹಾಗೂ ಗ್ರಾಹಕರಿಗೂ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ಹೇಳಿದರು.

ಅವರು ಗುರುವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧತೆಗೊಳಿಸುವಿಕೆ ಯೋಜನೆಯ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೃಷಿಕರು ಕಷ್ಟಪಟ್ಟು ಹೆಚ್ಚು ಶ್ರಮವಹಿಸಿ ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ, ಅವುಗಳನ್ನು ಸಂಸ್ಕರಣೆ ಮಾಡಲು ಆಗದೆ ಇರುವಾಗ ಕೈಚೆಲ್ಲಿ ಉತ್ಪನ್ನಗಳನ್ನು ಬೀದಿಗೆ ಎಸೆಯುವುದನ್ನು ನಾವು ಕಾಣುತ್ತಿದ್ದೇವೆ. ಸರಿಯಾದ ಬೆಲೆ ಸಿಗದ ಉತ್ಪನ್ನಗಳನ್ನು ಸಂಸ್ಕರಿಸಲು ಸಂಸ್ಕರಣಾ ಘಟಕಗಳು ಅತ್ಯವಶ್ಯಕವಾಗಿರುತ್ತವೆ ಎಂದರು.

ಮಾರುಕಟ್ಟೆಗೆ ಹೆಚ್ಚು ಉತ್ಪನ್ನಗಳು ಮಾರಾಟಕ್ಕೆ ಬಂದಾಗ ಸಹಜವಾಗಿ ಅವುಗಳ ಬೆಲೆಗಳು ಕುಸಿಯುತ್ತವೆ. ಆದರೆ ಅವುಗಳನ್ನು ಸಂಸ್ಕರಿಸಿ ನಿಯಮಿತವಾಗಿ ಕಾಲ-ಕಾಲಕ್ಕೆ ಮಾರುಕಟ್ಟೆಗೆ ಬಂದಾಗ ಉತ್ತಮ ಬೆಲೆ ಸಿಗುತ್ತದೆ. ಇದರಿಂದ ಕೃಷಿಕನಿಗೂ ಹಾಗೂ ಕೊಳ್ಳುವವರಿಗೂ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

ಹಾಲು ಉತ್ಪನ್ನಗಳನ್ನು ಸಹಕಾರ ಸಂಘಗಳ ಮೂಲಕ ಸಂಗ್ರಹಿಸಿ ಅವುಗಳನ್ನು ಸಂಸ್ಕರಿಸಿ ಅಮೂಲ್ ಸಂಸ್ಥೆಯು ಅಂತರಾಷ್ಟ್ರ‍ೀಯ ಮಟ್ಟದಲ್ಲಿ ಮಾರಾಟ ಮಾಡುವ ಕಾರ್ಯವನ್ನು ವರ್ಗೀಸ್ ಕುರಿಯನ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮಾಡಿರುವುದು ಒಂದು ದೊಡ್ಡ ಉದಾಹರಣೆಯಾಗಿದೆ ಎಂದ ಅವರು, ಅದೇ ರೀತಿಯಲ್ಲಿ ಪ್ರತಿಯೊಂದು ಉತ್ಪನ್ನಗಳನ್ನು ಸಂಸ್ಕರಿಸಿ ಕಾಲಕಾಲಕ್ಕೆ ಮಾರಾಟ ಮಾಡುವುದರಿಂದ ಜನರಿಗೆ ಹಾಗೂ ಉತ್ಪಾದಕರಿಗೂ ಅನುಕೂಲವಾಗಲಿದೆ ಎಂದರು.

ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಮೀನುಗಾರಿಕೆ ದೊಡ್ಡ ಉತ್ಪನ್ನ ಕ್ಷೇತ್ರವಾಗಿದೆ, ಆದರೆ ಅವುಗಳನ್ನು ಸಂಸ್ಕರಿಸಲು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಸಂಸ್ಕರಣಾ ಘಟಕಗಳಿವೆ. ಮೀನುಗಾರರು ಶ್ರಮದಿಂದ ಹಿಡಿದುಕೊಂಡು ಬಂದ ಮೀನುಗಳನ್ನು ಆ ದಿನವೇ ಮಾರಾಟ ಮಾಡಲು ಆಗದೆ ಹೋಲ್‌ಸೇಲ್ ದರದಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುವುದನ್ನು ನಾವು ಕಾಣುತ್ತಿದ್ದೇವೆ.

ಆತ್ಮನಿರ್ಭರ ಭಾರತ್ ಅಭಿಯಾನದಡಿ, ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವುದಕ್ಕಾಗಿ ದೇಶದಾದ್ಯಂತ 10 ಸಾವಿರ ಕೋಟಿ ರೂಗಳನ್ನು ನೀಡಿದ್ದು, ರಾಜ್ಯಕ್ಕೆ 650 ಕೋಟಿ ರೂ ಹಂಚಿಕೆಯಾಗಿದ್ದು, ಇದರ ಸಿಂಹಪಾಲನ್ನು ಜಿಲ್ಲೆಯ ಜನರು ಉಪಯೋಗ ಪಡೆದುಕೊಂಡು ದೇಶದಲ್ಲಿಯೇ ಮೀನುಗಾರಿಕೆ ಉತ್ಪನ್ನಗಳ ಸಂಸ್ಕರಣಾ ಕೇಂದ್ರವಾಗಿ ಗುರುತಿಸುವಂತಾಗಬೇಕು.

ಕಿರು ಆಹಾರ ಸಂರಕ್ಷಣಾ ಘಟಕಗಳಿಗೆ 10 ಲಕ್ಷ ರೂ ಗರಿಷ್ಟ ಮಿತಿಯೊಂದಿಗೆ ಅರ್ಹ ಯೋಜನ ವೆಚ್ಚದ ಶೇ. 35 ರಷ್ಟು ಸಾಲ ಪರಿವರ್ತಿತ ಬಂಡವಾಳ ಸಹಾಯಧನವನ್ನು ಒದಗಿಸಲಾಗಿಸಲಾಗುವುದು. ಅರ್ಹ ಫಲಾನುಭವಿಗಳು ಇದರ ಪ್ರಯೋಜನೆ ಪಡೆದುಕೊಳ್ಳಬೇಕು ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಆತ್ಮನಿರ್ಭರ ಭಾರತ್ ಅಭಿಯಾನದ ಭಾಗವಾಗಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂರಕ್ಷಣಾ ಉದ್ದಿಮೆಗಳ ನಿಯಮಬದ್ಧ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲಾಗಿದೆ. ಉದ್ದಿಮೆದಾರರಿಗೆ ಸಂಸ್ಕರಣೆ ತರಬೇತಿ ನೀಡುವುದರ ಜೊತೆಗೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ರೈತ ಉತ್ಪಾದನಾ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ಉತ್ಪಾದಕ ಸಹಕಾರಿ ಸಂಘಗಳಿಗೆ ಆಹಾರ ಸಂರಕ್ಷಣೆಯಲ್ಲಿ ಉತ್ತೇಜನ ನೀಡುವುದಾಗಿದೆ ಎಂದರು.

ಬೆಂಗಳೂರಿನ ರಾಜ್ಯ ಯೋಜನಾ ನಿರ್ವಹಣಾ ಘಟಕದ ಅಧಿಕಾರಿ ವಿಘ್ನೇಶ್, ‘ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ ನಿಯಮಬದ್ದತೆಗೊಳಿಸುವಿಕೆ ಯೋಜನೆ’ ಬಗ್ಗೆ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಚೈತನ್ಯ ‘ತೋಟಗಾರಿಕಾ ಬೆಳೆಗಳಲ್ಲಿ ಮೌಲ್ಯವರ್ಧನೆ’ ಬಗ್ಗೆ ಹಾಗೂ ಮಂಗಳೂರು ಫಿಶರೀಸ್ ಕಾಲೇಜಿನ ಪ್ರೊ. ಡಾ.ಫಜಲ್ ‘ಮೀನಿನ ಉತ್ಪನ್ನಗಳ ತಯಾರಿ ಮತ್ತು ಮೌಲ್ಯವರ್ಧನೆ’ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕೆಇಪಿಪಿಇಸಿಯ ವ್ಯವಸ್ಥಾಪಕ ನಿರ್ದೇಶಕ ಪರ್ವೆಜ್ ಬಂಟನಾಳ್, ನಬಾರ್ಡ್ನ ಪ್ರಬಂಧಕಿ ಸಂಗೀತಾ ಕಾರ್ಟ, ರಾಜ್ಯ ಮಟ್ಟದ ಸಾವಯವ ಕೃಷಿಕರ ಉನ್ನತ ಮಟ್ಟದ ಸಮಿತಿಯ ಸದಸ್ಯ ರಾಘವೇಂದ್ರ ಉಪ್ಪಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!