ಉಡುಪಿ: ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಅಥವಾ ಮೊಬೈಲ್ ತೆಗೆಸಿಕೊಟ್ಟು ಸುಮ್ಮನಾದರೆ ಸಾಲದು. ಮಕ್ಕಳ ವರ್ತನೆಯನ್ನು ಗಮನಿಸುತ್ತ ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಆಗ ಮಾತ್ರ ಸಾಧನೆ ಮಾಡಲು ಶಿಕ್ಷಕರು ಮಕ್ಕಳನ್ನು ಪ್ರೇರೇಪಿಸಬಹುದು, ಸಾಧಿಸುವ ಛಲವನ್ನು ಹುಟ್ಟು ಹಾಕಬಹುದು. ಹಾಗಾಗಿ ಪೋಷಕರು ಆಗಾಗ್ಗೆ ಶಾಲೆಗೆ ಭೇಟಿ ನೀಡುವುದು ಸೂಕ್ತ ಎಂದು ಅಜ್ಜರಕಾಡು ವಾರ್ಡ್ ನಗರಸಭಾ ಸದಸ್ಯೆ ರಶ್ಮಿ ಸಿ. ಭಟ್ ಅಭಿಪ್ರಾಯಪಟ್ಟರು.
ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈ ಶಾಲೆಯ ವಿದ್ಯಾರ್ಥಿನಿಯರ ಪೋಷಕರು ಬಹುಪಾಲು ಪ್ರಜ್ಞಾವಂತರಾಗಿದ್ದಾರೆ, ಆದ್ದರಿಂದ ಶಿಕ್ಷಕರ ಪ್ರಯತ್ನ ಸಾರ್ಥಕವಾಗುತ್ತಿದೆ. ಶಾಲೆಗೆ ಪೋಷಕರ ಸಹಕಾರ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು.
ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರುದ್ರೇ ಗೌಡ ವಹಿಸಿ ಮಾತನಾಡುತ್ತಾ, ಸಾಧನೆ ಮಾಡಿದ ವಿದ್ಯಾರ್ಥಿನಿಯರು ತಮ್ಮ ನಂತರದ ಬ್ಯಾಚ್ ನ ವಿದ್ಯಾರ್ಥಿನಿಯರಿಗೆ ತಮ್ಮ ಸಾಧನಾ ಪಥವನ್ನು ವಿವರಿಸಿ ಹೇಳಿ ಅವರಿಗೂ ಮಾರ್ಗದರ್ಶನ ಮಾಡಬೇಕೆಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ತಾರಾ ದೇವಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನಿಯಾದ ಸಮತಾ ಹಾಗೂ ಇಪ್ಪತ್ತು ಮಂದಿ ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಸಮತಾ ತನ್ನ ಅನುಭವವನ್ನು ಹಂಚಿಕೊಂಡರು.
ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಹೊಸ ಸದಸ್ಯರನ್ನೂ ಕೂಡ ಆಯ್ಕೆ ಮಾಡಲಾಯಿತು.
ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಬೋವಿ ವಂದಿಸಿದರು.