ಕಾರು ನಿಧಾನವಾಗಿ ಚಲಿಸತೊಡಗುವಾಗ, ತಲೆಯನ್ನು ಹೊರಹಾಕಿ ನೋಡುತ್ತಾ ನಿಂತಿರುವ ಅಪ್ಪ ಅಮ್ಮ ಕಣ್ಮರೆಯಾಗುವವರೆಗೂ ಕೈಯನ್ನು ಬೀಸುತ್ತಾ ಹೋಗುವಾಗ ಆಕೆಗೆ ಅರಿಯದೆ ಎರಡು ಹನಿ ಕಣ್ಣೀರು ಆಕೆಯ ಕಣ್ಣುಗಳಿಂದ ಗಲ್ಲದ ಮೂಲಕ ಭೂಸ್ಪರ್ಶವಾಗುವುದು. ಇದು ಹಳ್ಳಿಗರ ಮನೆಗಳಲ್ಲಿ ಕಂಡುಬರುವ ರಕ್ತಸಂಬಂಧದ ನಡುವಿನ ಗಾಢತೆ.
ಪತಿಯ ಒಪ್ಪಿಗೆಯನ್ನು ಪಡೆದು, ತವರು ಮನೆಗೆ ಹೋಗಲು ರೆಡಿಯಾಗಿ ನಿಂತಿರುವ ಸ್ತ್ರೀಯರನ್ನು ಒಮ್ಮೆ ನೋಡಲೇಬೇಕು. ಯಾವತ್ತೂ ಇರದ ಉತ್ಸಾಹವಾಗಿರುತ್ತದೆ ಆವಾಗ ಆಕೆಯ ಮುಖದಲ್ಲಿ. ಬೆಳ್ಳಂಬೆಳಗೆನೇ ಎದ್ದು ಎಲ್ಲಾ ಕೆಲಸಗಳನ್ನು ಬೇಗಬೇಗನೇ ಮಾಡಿ ಮುಗಿಸಿದ ನಂತರ ಮಿಂದು ಕೈಗೆ ಸಿಕ್ಕಿದ ಸೀರೆಯನ್ನು ಉಟ್ಟು ಬೆಳಗಿನ ಉಪಹಾರದ ಶಾಸ್ತ್ರವನ್ನು ಮುಗಿಸಿ, ಹೆಸರಿಗೆ ಮಾತ್ರ ಕೂದಲನ್ನು ಬಾಚಿ ಕಟ್ಟಿ, ಮುಖಕ್ಕೆ ಸ್ವಲ್ಪ ಪೌಡರನ್ನು ಹಚ್ಚಿ ಬಸ್ ಸ್ಟಾಪ್ ಕಡೆ ಸರಸರನೆ ನಡೆಯುವಳು. ಮೊದಲ ಬಸ್ ನಲ್ಲಿ ರಶ್ ಹೆಚ್ಚಾಗಿದ್ದರೂ, ಆ ಬಸ್ಸನ್ನು ಹತ್ತಿ ಹೇಗಾದರೂ ಮನೆ ತಲುಪಿದರೆ ಸಾಕು ಎಂಬ ಒಂದೇ ಚಿಂತೆಯಾಗಿರುತ್ತದೆ ಆಕೆಯ ಮನದಲ್ಲಿ.
ಕೊನೆಗೆ ತನ್ನ ಮನೆಯ ಸ್ಟಾಪ್ ಬಂದಾಗ ಬಸ್ ನಿಂದ ಇಳಿದು ತಾನು ಹುಟ್ಟಿ ಬೆಳೆದ ತನ್ನ ಊರಿನ ಗದ್ದೆಯ ಬದಿಯಲ್ಲಿರುವ ಕಾಲುದಾರಿಯಿಂದ ಓಟಕ್ಕೆ ಸಮವಾದ ನಡತೆಯಾಗಿರುತ್ತದೆ ಆಕೆಯದ್ದು. ಇದರ ಮದ್ಯೆ ದಾರಿಯ ಪಕ್ಕದಲ್ಲಿನ ಪರಿಚಯಿಸ್ತರನ್ನು ಕೂಗಿ ಕರೆದು ಕ್ಷೇಮಾನ್ವೇಷಣೆ ಮತ್ತು ತಾನು ತವರಿಗೆ ಬರುವ ಖುಷಿಯನ್ನು ಅವರತ್ರನೂ ಹಂಚಿಕೊಂಡು ಸರಸರನೆ ನಡೆಯುವಳು. ಮನೆ ಮುಂಭಾಗ ತಲುಪುವಾಗ ಮನೆಬಾಗಿಲಿನಲ್ಲಿ ಮಗಳ ಬರುವಿಕೆಗಾಗಿ ಕಾಯುತ್ತಾ ವಯಸಾದ ಅಪ್ಪ ಅಮ್ಮ ನಿಂತಿರುತ್ತಾರೆ.
ಮಗಳನ್ನು ನೋಡಿದ ಕ್ಷಣ “ನೀನು ತುಂಬಾ ತೆಳ್ಳಗಾಗಿ ಅಗರಬತ್ತಿಯ ಹಾಗೆ ಆಗಿಬಿಟ್ಟಿಯಲ್ಲಾ?” ಎಂಬ ಅಮ್ಮನ ಪ್ರಶ್ನೆಗೆ ಉತ್ತರವಾಗಿ ಒಂದು ಚಿಕ್ಕ ಮುಗುಳ್ನಗುವಾಗಿರುತ್ತದೆ ಆಕೆಯ ಪ್ರತಿಕ್ರಿಯೆ. ಮತ್ತೆ ಸೀದಾ ಅಡುಗೆಮನೆಗೆ ಆಕೆಯ ನಡಿಗೆ. ಅಲ್ಲಿ ಅಮ್ಮ ಮಾಡಿಟ್ಟ ಹರಿವೆ ಸೊಪ್ಪಿನ ಪಲ್ಯ, ಚಟ್ನಿ, ಸಾಂಬಾರು, ಮೊಸರು, ಉಪ್ಪಿನಕಾಯಿ ಮತ್ತು ಅನ್ನ ಹಾಕಿಕೊಂಡು ತಿನ್ನೋಕೆ ಶುರು ಮಾಡುವಳು. ಅದನ್ನು ನೋಡುವಾಗ ನೀನು ಅಲ್ಲಿ ಉಪವಾಸವಿರೋದಾ ಎಂಬ ಅರ್ಥದಲ್ಲಿ ಅಮ್ಮ ಸೊಂಟದ ಮೇಲೆ ಕೈಯನ್ನಿಟ್ಟು ನೋಡುವ ಒಂದು ನೋಟವಿದೆ. ಅಮ್ಮ ನೋಡುತ್ತಿದ್ದರೂ, ನೋಡದ ಹಾಗೆ ನಟಿಸುತ್ತಾ ಆಕೆ ಒಂದೊಂದು ತುತ್ತನ್ನೂ ಆಸ್ವಾದಿಸುತ್ತಾ ತಿನ್ನುವಳು.
ಮತ್ತೆ ಅಲ್ಲಿನ ಪಕ್ಕದ ಮನೆಯವರ ಬಗೆಗಿನ ವಿಷಯಗಳನ್ನು ಕೇಳುವುದು. ಯಾರದೆಲ್ಲಾ ಮದುವೆ ಆಯಿತು, ಯಾರೆಲ್ಲಾ ಓಡಿ ಹೋದರು? ಯಾರಿಗೆಲ್ಲಾ ಮಕ್ಕಳಾಯಿತು? ಆ ಮೇಲುಗಡೆ ಮನೆಯ ಡೊಳ್ಳು ಹೊಟ್ಟೆ ನಾರಾಯಣ ಸ್ವಾಮಿ ತಾತ ಹೇಗಿದ್ದಾರೆ?ಎಂಬಿತ್ಯಾದಿ ವಿಷಯಗಳನ್ನು ತಿಳಿದುಕೊಳ್ಳದಿದ್ದರೆ ಆಕೆಗೆ ಸಮಾಧಾನವೇ ಇಲ್ಲ. ಸಂಜೆ ಮಗಳಿಗೆ ಇಷ್ಟವಿರುವ ತಿಂಡಿಗಳನ್ನು ಪಕ್ಕದ ಸುಬ್ರಹ್ಮಣ್ಯ ಭಟ್ಟರ ಹೋಟೆಲಿನಿಂದ ತಂದು ಟೇಬಲ್ ಮೇಲೆ ಇಡುತ್ತಾ ತಣ್ಣಗಾಗುವುದಕ್ಕಿಂತ ಮುಂಚೆ ತಿನ್ನು ಆಯಿತಾ ಪುಟ್ಟೀ ಅಂತ ಹೇಳುತ್ತಾ ಮನೆಯ ಹಿತ್ತಲಿನ ಕಡೆ ಹೋಗುವ ಅಪ್ಪಾಜಿಯನ್ನು ಪ್ರೀತಿಯಿಂದ ಒಮ್ಮೆ ನೋಡುವಳು. ಮತ್ತೆ ಚಿಕ್ಕ ಮಗುವಿನ ಹಾಗೆ ಟೇಬಲ್ ಮೇಲಿರುವ ತಿಂಡಿಗಳನ್ನು ಒಂದೊಂದಾಗಿ ಸ್ವಾಹ ಮಾಡುವಳು. ತಡರಾತ್ರಿಯವರೆಗೆ ಮಾತನಾಡುತ್ತಾ ಕುಳಿತ ನಂತರ ಅಮ್ಮನನ್ನು ಅಪ್ಪಿಕೊಂಡು ಮಲಗಿ ನಿದ್ರಿಸುತ್ತಾಳೆ.
ಗಂಡನ ಮನೆಯಲ್ಲಿ ಬೆಳಗೆ ಐದು ಗಂಟೆಗೆ ಆಲರಾಂ ಇಟ್ಟು ಎದ್ದೇಳುವ ಆಕೆ ತವರು ಮನೆಯಲ್ಲಿ ಎದ್ದೇಳುವಾಗ ಬೆಳಿಗ್ಗೆ ಒಂಬತ್ತು ಗಂಟೆಯಾಗಿರುತ್ತದೆ. ಈ ಹವ್ಯಾಸವನ್ನು ಹೆಚ್ಚಿನವರು ಪಾಲಿಸುತ್ತಾರೆ. ಅಷ್ಟರಲ್ಲಿ ಬೆಳಗಿನ ತಿಂಡಿ ಕಾಫಿ ಎಲ್ಲಾ ಅಮ್ಮ ತಯಾರಿಸಿ ಇಟ್ಟಿರುತ್ತಾರೆ. ಬೆಳಿಗಿನ ತಿಂಡಿಯನ್ನು ತಿಂದು ಕಾಫಿ ಕುಡಿದು ಮನೆಯ ಹಿತ್ತಲ ಬಳಿ ಜಗಲಿಯಲ್ಲಿ ಕುಳಿತು, ಕೋಳಿಗಳನ್ನು ನೋಡುತ್ತಾ ಕೂರುವಳು. ಮತ್ತೆ ಸ್ವಲ್ಪ ಹೊತ್ತು ಟಿವಿ ಎಲ್ಲಾ ನೋಡಿದ ನಂತರ, ಸ್ನಾನಕ್ಕೆ ಹೋಗುವಾಗ, ಅಮ್ಮ ಮನೆಯ ಹಿತ್ತಲ ಬದಿಯಲ್ಲಿರುವ ದಾಸವಾಳದ ಎಲೆ ಮತ್ತು ಹೂಗಳನ್ನು ಕಲ್ಲಿನಿಂದ ಅರೆದು, ಚಿಕ್ಕ ಪಾತ್ರೆಯಲ್ಲಿ ಹಾಕಿ ತಂದು ಆಕೆಯ ತಲೆಯಲ್ಲಿ ಹಾಕಿ ತಿಕ್ಕುತ್ತಾ- ಎಷ್ಟೊಂದು ಕೂದಲಿತ್ತು? ಸರಿಯಾಗಿ ನೋಡದ ಕಾರಣವಲ್ವಾ? ಈಗ ನೋಡು ಇಲಿಯ ಬಾಲದ ತರಹ ಆಗಿದೆ ಎಂಬ ಬಾಯಿಮಾತು ಕೂಡ. ಸಂಜೆ ಕೂಡ ಏನಾದರೂ ಸ್ಪೆಶ್ಯಲ್ ತಿಂಡಿ ಮಾಡಿರುತ್ತಾರೆ ಅಮ್ಮ. ಟಿವಿಯ ಮುಂದೆ ಕುಳಿತು ಅದನ್ನು ಚಿಕ್ಕ ಮಕ್ಕಳ ಹಾಗೆ ತಿನ್ನುತ್ತಾಳೆ, ಹಾಗೆ ಐದು ದಿನಗಳ ಫುಲ್ ಮಜಾ.
ಐದನೆಯ ದಿನ ಆಕೆಯ ಪತಿದೇವ ಮನೆಯ ಹಿತ್ತಲಲ್ಲಿ ಬಂದು ಲೋಂಗ್ ಹಾರ್ನ್ ಹೊಡೆಯುವಾಗಲೇ ಆಕೆಗೆ ಎಚ್ಚರವಾಗುವದು. ಅವಳು ಇನ್ನೆರಡು ದಿನ ಇಲ್ಲೇ ಇರಲಿ ಜೊತೆಗೆ ನೀನೂ ಇದ್ದುಬಿಡು ಅಂತ ಅಪ್ಪ ಅಮ್ಮ ಇಬ್ಬರೂ ಒಕ್ಕೊರಳಿನಿಂದ ಹೇಳುವಾಗ, ಆತ – ಅದೆಲ್ಲಾ ಇನ್ನೊಂದು ದಿವಸ ನೋಡೋಣ. ಅವಳಿಲ್ಲದೆ, ಮನೆಯ ವಾತಾವರಣವೆಲ್ಲಾ ಏರುಪೇರಾಗಿದೆ. ಅಂತ ಹೇಳುತ್ತಾ ಪತ್ನಿಯ ಮುಖವನ್ನು ಒಮ್ಮೆ ನೋಡುವ ನೋಟವಿದೆ “ಬ್ಯಾಗ್ ತೆಗೊ ಬಾ ಹೋಗೋಣ” ಎಂಬ ಅರ್ಥವಾಗಿರುತ್ತದೆ ಆ ನೋಟಕ್ಕೆ.
ಕೊನೆಗೆ ಮನಸಿಲ್ಲದ ಮನಸಿನಿಂದ ಹೊರಡಲು ರೆಡಿಯಾಗುತ್ತಾಳೆ. ಆಕೆ ರೆಡಿಯಾಗುವಷ್ಟರಲ್ಲಿ ಅಪ್ಪಾಜಿಯು, ಹಲಸಿನ ಕಾಯಿ, ಅನಾನಸು, ಹರಿವೆ, ಅಲಸಂಡೆ, ಹತ್ತನ್ನೆರಡು ತೆಂಗಿನ ಕಾಯಿ, ಇನ್ನಿತರ ತರಕಾರಿಗಳನ್ನು ಮಗಳಿಗಾಗಿ ಪ್ಯಾಕ್ ಮಾಡಿ ತಂದು ಕಾರಲ್ಲಿ ಇಡುವರು. ಅಷ್ಟರಲ್ಲಿ ಅಮ್ಮ ಹಸುವಿನ ತುಪ್ಪ, ಜೇನುತುಪ್ಪ, ಹಾಲು, ಮೊಸರು, ಮತ್ತೆ ಗಂಡನ ಮನೆಯಲ್ಲಿ ನೆಡೋದಕ್ಕೆ ಒಂದಿಷ್ಟು ಬಣ್ಣ ಬಣ್ಣದ ಹೂವಿನ ಗಿಡಗಳು ಎಲ್ಲಾ ತಂದು ಕಾರಿನ ಡಿಕ್ಕಿಯಲ್ಲಿ ಇಡುವರು. ಕೊನೆಗೆ ಅಪ್ಪ ಅಮ್ಮನಲ್ಲಿ ಬಾಯ್ ಬಾಯ್ ಹೇಳಿ ಕಾರಿನೊಳಕ್ಕೆ ಹತ್ತುವಾಗ ಮಗಳನ್ನು ಕಣ್ತುಂಬ ನೋಡಿ ಸಾಕಾಗದ ಹಾಗೆ ಅಪ್ಪ ಅಮ್ಮನ ಒಂದು ನೋಟವಿದೆ.
ಕಾರು ನಿಧಾನವಾಗಿ ಚಲಿಸತೊಡಗುವಾಗ, ತಲೆಯನ್ನು ಹೊರಹಾಕಿ ನೋಡುತ್ತಾ ನಿಂತಿರುವ ಅಪ್ಪ ಅಮ್ಮ ಕಣ್ಮರೆಯಾಗುವವರೆಗೂ ಕೈಯನ್ನು ಬೀಸುತ್ತಾ ಹೋಗುವಾಗ ಆಕೆಗೆ ಅರಿಯದೆ ಎರಡು ಹನಿ ಕಣ್ಣೀರು ಆಕೆಯ ಕಣ್ಣುಗಳಿಂದ ಗಲ್ಲದ ಮೂಲಕ ಭೂಸ್ಪರ್ಶವಾಗುವುದು. ಇದು ಹಳ್ಳಿಗರ ಮನೆಗಳಲ್ಲಿ ಕಂಡುಬರುವ ರಕ್ತಸಂಬಂಧದ ನಡುವಿನ ಗಾಢತೆ.
-ದೀಪಿಕಾ
ದ್ವಿತೀಯ ಬಿಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ವಿಭಾಗ,
ಎಂಜಿಎಂ ಕಾಲೇಜು ಉಡುಪಿ.