ಕೊರೊನ ಕಾಲಘಟ್ಟದಲ್ಲಿ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯೇ ಅಡಿಮೇಲಾಗಿ ಬಿಟ್ಟಿದೆ. ಸುಮಾರು ಎರಡು ಶೈಕ್ಷಣಿಕ ವರುಷಗಳೇ ದಿಕ್ಕು ತಪ್ಪಿದ ಹಡಗಿನಂತಾಗಿದೆ. ಈ ನಷ್ಟವನ್ನು ಯಾವುದೇ ಆರ್ಥಿಕ ಮಾಪನದಿಂದ ಅಳೆಯಲು ಸಾಧ್ಯವಿಲ್ಲ. ಇದು ಬೌದ್ಧಿಕ ಮಾನವ ಸಂಪತ್ತಿನ ಮೇಲಾದ ನಷ್ಟವೆಂದೇ ಪರಿಗಣಿಸಬೇಕಾಗುತ್ತದೆ. ಈ ಕೊರೊನ ಅವಧಿಯಲ್ಲಿ ಅಧ್ಯಯನಶೀಲರಾದ ವಿದ್ಯಾರ್ಥಿಗಳ ಬಗ್ಗೆ ಸರಕಾರಕ್ಕೆ ಹೆತ್ತವರಿಗೂ ವಿಶೇಷವಾದ ಗಮನ ಕಾಳಜಿ ಇರಲೇಬೇಕು. ಅದು ಬರೇ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ವಿದ್ಯಾರ್ಥಿಗಳು ಮಾತ್ರವಲ್ಲ ಎಲ್ಲಾ ತರಗತಿಯ ಎಲ್ಲಾ ವಿಷಯಗಳ ಕಲಿಕಾ ವಿದ್ಯಾರ್ಥಿಗಳ ಮೇಲೆ ಸಮಾನವಾದ ಪ್ರೀತಿ, ದಯೆ ಸಹಾಯಹಸ್ತ ನೀಡಲೇಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯೂ ಹೌದು.
ಪರೀಕ್ಷೆಗೆ ತೋರುವ ಪ್ರೀತಿ ಕಾಳಜಿ ಕಲಿಕಾ ವ್ಯವಸ್ಥೆಗೆ ನೀಡಿಲ್ಲ? 2020 ರಿಂದ ಹಿಡಿದು ಇಂದಿನವರೆಗೆ ಸುಸೂತ್ರವಾಗಿ ಸಮರ್ಪಕವಾಗಿ ತರಗತಿಗಳು ನಡೆದಿದೆಯೇ? ಅನ್ನುವುದನ್ನು ಶಿಕ್ಷಣ ಸಚಿವರು ಶಿಕ್ಷಕರು ಹೆತ್ತವರು ಗಂಭೀರವಾಗಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಆನ್ ಲೈನ್ /ಆಫ್ ಲೈನ್ ಅನ್ನುವ ಗೊಂದಲದಲ್ಲಿಯೇ ಪಾಠಮಾಡಿ ಮುಗಿಸಿದ್ದೇವೆ. ಅಂತೂ ಕೊನೆಗೂ ಇದರ ಪ್ರತಿಫಲ ಉಣಬೇಕಾದವರು ನಮ್ಮ ವಿದ್ಯಾರ್ಥಿಗಳು ಮತ್ತು ಹೆತ್ತವರು.
ರಾಷ್ಟ್ರ ಮಟ್ಟದ ಶಿಕ್ಷಣ ಇಲಾಖೆ (ಸಿ.ಬಿ.ಎಸ್.ಸಿ) ಇದ್ಯಾವ ರಿಸ್ಕು ಬೇಡ ಅಂದುಕೊಂಡು ಹತ್ತು ಹನ್ನೆರಡರ ಪರೀಕ್ಷೆಗಳನ್ನು ರದ್ದು ಮಾಡಿ ಶಾಪ ಮುಕ್ತರಾದರು. ಅವರು ಶಾಪ ಮುಕ್ತರಾದ ದಾರಿಯಲ್ಲಿಯೇ ನಾವು ಶಾಪಮುಕ್ತರಾಗುತ್ತೇವೆ ಅಂದುಕೊಂಡು ನಮ್ಮ ಶಿಕ್ಷಣ ಸಚಿವರು ಕೂಡ ಪ್ರಥಮ; ದ್ವಿತೀಯ ಪಿ.ಯು.ಸಿ.ಗಳ ಪರೀಕ್ಷೆಗಳನ್ನು ರದ್ದು ಮಾಡಿ ಸ್ವಲ್ಪಮಟ್ಟಿಗೆ ಅಪಾಯದಿಂದ ಪಾರಾದರು. ಅದೇ ಹತ್ತನೆ ತರಗತಿಗಳಿಗೆ ಸರಳ ರೀತಿಯಲ್ಲಿ ಪರೀಕ್ಷೆ ಮಾಡಿ ಯಾರೂ ಫೈಲಾಗದಂತೆ ನೋಡಿಕೊಳ್ಳುವ ಭರವಸೆ ಸಚಿವರಿಂದ. ಏನೇ ಆಗಲಿ ಪೂರ್ತಿಯಾಗಿ ಸರ್ಕಾರವನ್ನು ತಪ್ಪಿಸ್ಥರಾಗಿ ಕಾಣುವುದು ಕೂಡ ಸರಿಯಲ್ಲ.
ಸರಕಾರಕ್ಕೆ ಬಹುಮುಖ್ಯವಾಗಿ ಕಾಳಜಿ ಇದ್ದದ್ದು ಎರಡನೆಯ ವರುಷದ ವಿಜ್ಞಾನ ವಿದ್ಯಾರ್ಥಿಗಳ ಮೇಲೆ ಹೊರತು ಕಾಮರ್ಸ್; ಆರ್ಟ್ಸ್ ವಿದ್ಯಾರ್ಥಿಗಳ ಮೇಲಲ್ಲ. ಅವರು ಇವತ್ತಲ್ಲ ನಾಳೆ ಅಥವಾ ಕೊರೊನ ಮುಗಿದ ಮೇಲಾದರೂ ಪಾಸಾಗಿ ಹೋಗುತ್ತಾರೆ. ಆದರೆ ನಾಳೆ ಡಾಕ್ಟರ್ಸ್ ಇಂಜಿನಿಯರ್ ಆಗುವವರ ಗತಿಯೇನು.? ಹೆತ್ತವರು ಕೂಡ ಅಷ್ಟೇ ಹೆಚ್ಚು ಜೀವ ಬಡಿದು ಕೊಂಡಿದ್ದು ಈ ವಿಷಯದ ಮೇಲೇ!!?
ರಾಷ್ಟ್ರ ಮಟ್ಟದಲ್ಲಿ ಮೆಡಿಕಲ್ ಪ್ರವೇಶಾತಿಗೆ “ನೀಟ್” ಪರೀಕ್ಷೆ ಇದಕ್ಕೂ ನಮ್ಮ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಹಾಗಾಗಿ ನಮ್ಮ ವಿದ್ಯಾರ್ಥಿಗಳಿಗೆ ಯಾವುದೇ ಬೋರ್ಡ್ ಪರೀಕ್ಷೆ ಮಾಡದೇ ನೀಟಿಗೆ ನಮ್ಮ ಮಕ್ಕಳನ್ನು ನೇರವಾಗಿ ಕಳುಹಿಸಿ ಬಿಟ್ರೆ ನಮ್ಮ ಕೆಲಸ ಮುಗಿಯಿತು. ಮತ್ತೆ ನೀಟ್; ಬೀಟ್ ಪಾಸು ಫೈಲು ಅವರ ಹಣೆಬರಹ ಅವರು ನೋಡಿಕೊಳ್ಳಲಿ. ಅಲ್ಲಿ ಹೇಗಿದ್ದರೂ ಪಿ.ಯು. ಬೋರ್ಡ್ ಮಾರ್ಕ್ಸ್ ಲೆಕ್ಕಕ್ಕೆ ಇಲ್ಲ. ಇನ್ನು ಉಳಿದಿರುವುದು ರಾಜ್ಯದಲ್ಲಿ ಇಂಜಿನಿಯರಿಂಗ್ ಕೋರ್ಸುಗಳಿಗೆ ನಡೆಯಬೇಕಾದ ಸಿ.ಇ.ಟಿ. ಪ್ರೌಡ ಶಿಕ್ಷಣ ಸಚಿವರಿಗೆ ಇಲ್ಲಿ ಇನ್ನೊಂದು ಪಾಪ ಪ್ರಜ್ಞೆ ಕಾಡಲು ಶುರು ಮಾಡಿತು. ಈ ಎರಡು ವರುಷ ಸರಿಯಾಗಿ ನಾವು ಪಾಠನೇ ಮಾಡಿಲ್ಲ. ಆದರೆ ಸಿ.ಇ.ಟಿ ನೀಟ್ ನಂತಲ್ಲ ಇಲ್ಲಿ 50/50. ಇವರಿಗೆ ಎರಡನೇ 50* ಬಗ್ಗೆ ತಲೆ ಬಿಸಿ ಇಲ್ಲ; ಆದರೆ ಮೊದಲ 50 *ಬಗ್ಗೇನೆ ಸ್ವಲ್ಪ ಪಾಪ ಪ್ರಜ್ಞೆ ಕಾಡಲು ಶುರುವಾಯಿತು. ಹಾಗಾಗಿ ಇದಕ್ಕೊಂದು ಉಪಾಯ ಹುಡುಕಿ; ಉನ್ನತ ಶಿಕ್ಷಣ ಸಚಿವರು/ಉಪ ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಲು ಹೊರಟಿದ್ದಾರೆ. ಅದೇನೆಂದರೆ ಸಿ.ಇ.ಟಿ.ಮಾರ್ಕ್ ಗಳನ್ನು ಮಾತ್ರ ಪರಿಗಣಿಸಿ ಇಂಜಿನಿಯರಿಂಗ್ ಸೀಟ್ ಹಂಚುವ ವ್ಯವಸ್ಥೆ ಮಾಡಿ. ಅಂದರೆ ಇಲ್ಲಿ ವಿದ್ಯಾರ್ಥಿಗಳಿಗೆ ಸೀಟ್ ಸಿಗಲಿಲ್ಲ ಅಂದರೆ ನಾವು ಕಾರಣವಲ್ಲ. ಅದಕ್ಕೆ ವಿದ್ಯಾರ್ಥಿಗಳೇ ಕಾರಣ. ನೀವು ಸಿ.ಇ.ಟಿ.ಗೆ ಸರಿಯಾಗಿ ತಯಾರು ಮಾಡಿಲ್ಲ.. ಸೀಟು ಸಿಕ್ಕಿಲ್ಲ. ಹೇಗಿದೆ ಬುದ್ದಿವಂತಿಕೆ?
ವಿದ್ಯಾರ್ಥಿಗಳು ಹೆತ್ತವರು ಕೇಳಬೇಕಾದದ್ದೂ ಇಷ್ಟೇ. ಸರಿಯಾಗಿ ಪಾಠಗಳೆ ನಡೆಯದಿರುವಾಗ ಸಿ.ಇ.ಟಿ. ಎದುರಿಸುವುದಾರೂ ಹೇಗೆ.? ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಸಿ.ಇ.ಟಿ.ಪರೀಕ್ಷೆಗಳನ್ನು ಎದುರಿಸುವುದು ತುಂಬ ಕಷ್ಟ ಅನ್ನುವುದು ಹಿಂದಿನ ಎಲ್ಲಾ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಹಾಗೇನ್ನುವಾಗ ಇಂತಹ ಬಡ ಅಸಹಾಯಕ ವಿದ್ಯಾರ್ಥಿಗಳನ್ನು ಸಿ.ಇ.ಟಿ ಕೂಪಕ್ಕೆ ತಳಿ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುವುದು ಬೇಡ. ನಮ್ಮ ವಿದ್ಯಾರ್ಥಿಗಳು ಅಷ್ಟೊ..ಇಷ್ಟೊ..ಪಿ.ಯು.ಬೋರ್ಡ್ ಪರೀಕ್ಷೆಯಲ್ಲಿ ಗಳಿಸುವ ಅಂಕವನ್ನು ಸಿ.ಇ.ಟಿ.ಗೆಸೇರಿಸಿ ಹೆಚ್ಚು ಅನುಕೂಲವಾಗುವಂತೆ ತಾಂತ್ರಿಕ ಕೋರ್ಸುಗಳಿಗೆ ಪ್ರವೇಶಾತಿ ನಡೆಸಿ ಅನ್ನುವುದು ನಮ್ಮ ಅಭಿಪ್ರಾಯ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ