ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರು ಸತತ ಎರಡನೇ ಅವಧಿಗೆ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿಗಳಾಗಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಪ್ರಮಾಣ ವಚನ ಸ್ವೀಕರಿಸಿದರು.
16 ಇತರ ಕ್ಯಾಬಿನೆಟ್ ಸಚಿವರು, 14 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 20 ರಾಜ್ಯ ಸಚಿವರು ಸೇರಿದಂತೆ ಹೊಸ ಕ್ಯಾಬಿನೆಟ್‌ನಲ್ಲಿ 50 ಇತರ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಇಂದು ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ಬಾಜ್‌ಪೈ ಏಕನಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಸಂಪುಟಕ್ಕೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು. ಯೋಗಿ ಆದಿತ್ಯನಾಥ್ ಅವರ ಮಾರ್ಗದರ್ಶನದಲ್ಲಿ ರಾಜ್ಯವು ಪ್ರಗತಿಯ ಮತ್ತೊಂದು ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ಪ್ರಧಾನಿ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಪೇಜಾವರ ಮಠಾಧೀಶರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.