ಜಮ್ಮು: ಜಮ್ಮುವಿನ ಪಂಜ್ತಿರ್ತಿ-ಸಿಧ್ರಾ ಎಂಬಲ್ಲಿ ಬುಧವಾರ ಬೆಳಿಗ್ಗೆ ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಎಡಿಜಿಪಿ ಮುಖೇಶ್ ಸಿಂಗ್ ತಿಳಿಸಿದ್ದಾರೆ.
ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನ ಒಂದು ಕೋಡೆಡ್ ಶೀಟ್ ಮತ್ತು ಒಂದು ಲೆಟರ್ ಪ್ಯಾಡ್ ಸಹಿತ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ಶಸ್ತ್ರಸಜ್ಜಿತರಾಗಿ ಬಂದಿದ್ದರು. ಗುಂಪಿನಲ್ಲಿ ಎಷ್ಟು ಉಗ್ರರು ಇದ್ದರು ಎಂಬ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಆದರೆ ಮೂವರು ಉಗ್ರರ ಹತ್ಯೆಯಾಗಿರುವುದನ್ನು ಎಡಿಜಿಪಿ ಖಚಿತಪಡಿಸಿದ್ದಾರೆ.
ಘಟನೆಯ ಬಗ್ಗೆ: ಗಣರಾಜ್ಯೋತ್ಸವದ ಪ್ರಯುಕ್ತ ಗಡಿಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ ನಲ್ಲಿದ್ದಾರೆ. ಇಂದು ಬೆಳಿಗ್ಗೆ ಸಂಶಯಾಸ್ಪದ ರೀತಿಯಲ್ಲಿ ಒಂದು ಟ್ರಕ್ ಸಂಚರಿಸುತಿತ್ತು. ಇದನ್ನು ಬೆನ್ನಟ್ಟಿದ ಭದ್ರತಾ ಪಡೆಗಳು, ಸಿಧ್ರಾ ಎಂಬಲ್ಲಿ ಟ್ರಕ್ ನಿಲ್ಲಿಸಿದಾಗ ಚಾಲಕ ತಪ್ಪಿಸಿಕೊಂಡ.
ಟ್ರಕ್ ನ್ನು ತಪಾಸಣೆಗೊಳಪಡಿಸಿದಾಗ ಅದರೊಳಗೆ ಅಡಗಿಸಿ ಕುಳಿತಿದ್ದ ಉಗ್ರರು ಗುಂಡಿನ ದಾಳಿಯನ್ನು ನಡೆಸಿದರು. ಆಗ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿದಾಗ ಟ್ರಕ್ ಸಂಪೂರ್ಣ ಭಸ್ಮವಾಗಿದೆ. ಘಟನೆಯಲ್ಲಿ ಮೂರಕ್ಕಿಂತ ಹೆಚ್ಚು ಉಗ್ರರ ಹತ್ಯೆಯಾಗಿರಬಹುದು ಎನ್ನಲಾಗಿದೆ.