Home ಸುದ್ಧಿಗಳು ರಾಷ್ಟ್ರೀಯ ದೇಶಕ್ಕಾಗಿ ಕ್ರಿಯಾಶೀಲತೆಯಿಂದ ಕೆಲಸ ಮಾಡಿ: ರಾಷ್ಟ್ರಪತಿ ಕೋವಿಂದ್

ದೇಶಕ್ಕಾಗಿ ಕ್ರಿಯಾಶೀಲತೆಯಿಂದ ಕೆಲಸ ಮಾಡಿ: ರಾಷ್ಟ್ರಪತಿ ಕೋವಿಂದ್

403
0

ನವದೆಹಲಿ: 75 ವರ್ಷಗಳ ಹಿಂದೆ ಭಾರತವು ಸ್ವಾತಂತ್ರ್ಯವನ್ನು ಪಡೆದಾಗ ಅನೇಕ ಸಂದೇಹವಾದಿಗಳು ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಭಾವಿಸಿದ್ದರು. ಪ್ರಾಚೀನ ಕಾಲದಿಂದ ಈ ಮಣ್ಣಿನಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಪೋಷಿಸಲಾಗಿದೆಯೆಂದು ಅವರಿಗೆ ತಿಳಿದಿರಲಿಲ್ಲ. ಭಾರತವನ್ನು ಪ್ರಬಲ ಪ್ರಜಾಪ್ರಭುತ್ವವನ್ನಾಗಿಸಿದ್ದೇವೆ. ಪ್ರತಿಯೊಬ್ಬರೂ ಕ್ರಿಯಾಶೀಲತೆಯಿಂದ ದೇಶಕ್ಕಾಗಿ ಕೆಲಸ ಮಾಡಿದರೆ ರಾಷ್ಟ್ರನಿರ್ಮಾಣ ಪರಿಕಲ್ಪನೆ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

ಅವರು ಶನಿವಾರ 75ನೇ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿ ಮಾತನಾಡಿದರು. ಇತ್ತೀಚೆಗೆ ಮುಕ್ತಾಯಗೊಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳು ತಮ್ಮ ಅದ್ಭುತ ಪ್ರದರ್ಶನದಿಂದ ದೇಶವಾಸಿಗಳ ಮನಗೆದ್ದಿದ್ದಾರೆ. 121 ವರ್ಷಗಳಲ್ಲಿ ಅತಿ ಹೆಚ್ಚು ಪದಕಗಳನ್ನು ಭಾರತ ಗೆದ್ದಿದೆ. ನಮ್ಮ ಹೆಣ್ಣು ಮಕ್ಕಳು ಅನೇಕ ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಿಂದ ಸಶಸ್ತ್ರ ಪಡೆಗಳವರೆಗೆ, ಪ್ರಯೋಗಾಲಯಗಳಿಂದ ಆಟದ ಮೈದಾನಗಳವರೆಗೆ ನಮ್ಮ ಹೆಣ್ಣು ಮಕ್ಕಳು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳ ಈ ಯಶಸ್ಸಿನಲ್ಲಿ ಭವಿಷ್ಯದ ಅಭಿವೃದ್ಧಿ ಹೊಂದಿದ ಭಾರತದ ಒಂದು ನೋಟವನ್ನು ನಾನು ನೋಡುತ್ತೇನೆ.

ಕಳೆದ ವರ್ಷದಂತೆ ಈ ವರ್ಷವೂ ಸಾಂಕ್ರಾಮಿಕ ರೋಗದಿಂದಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಮೇಲೆ ಕಾರ್ಮೋಡ ಕವಿದಿದೆ. ಆದರೂ ನಾವು ಯಾವಾಗಲೂ ಉತ್ಸಾಹದಿಂದ ಇರಬೇಕು. ಸಾಂಕ್ರಾಮಿಕದ ತೀವ್ರತೆಯು ಕಡಿಮೆಯಾಗಿದೆ ಆದರೆ ಕರೋನ ವೈರಸ್ ಇನ್ನೂ ದೂರವಾಗಿಲ್ಲ. ಕಳೆದ ವರ್ಷ ಸಾರ್ವಜನಿಕರ ಸಾಂಘಿಕ ಪ್ರಯತ್ನದಿಂದ ಸೋಂಕು ಹರಡುವಿಕೆಯನ್ನು ನಿಯಂತ್ರಣಕ್ಕೆ ತರುವಲ್ಲಿ ನಾವು ಯಶಸ್ವಿಯಾಗಿದ್ದೆವು.

ನಮ್ಮ ವಿಜ್ಞಾನಿಗಳು ಬಹಳ ಕಡಿಮೆ ಸಮಯದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದರು. ಆದ್ದರಿಂದ ಈ ವರ್ಷದ ಆರಂಭದಲ್ಲಿ ನಾವು ಇತಿಹಾಸದಲ್ಲಿ ಅತಿದೊಡ್ಡ ಲಸಿಕಾ ಅಭಿಯಾನವನ್ನು ಆರಂಭಿಸಿದ್ದರಿಂದ ಸೋಂಕಿನ ತೀವ್ರತೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾದೆವು. ಮುಂದಿನ ದಿನಗಳಲ್ಲಿ ನಮ್ಮ ಜವಾಬ್ದಾರಿಯನ್ನು ಅರಿತು ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ನಮ್ಮ ಕರೋನಾ ಸೇನಾನಿಗಳು, ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರ ಪ್ರಯತ್ನದಿಂದ ಎರಡನೇ ಅಲೆಯ ಪರಿಣಾಮವನ್ನು ತಗ್ಗಿಸಲು ಯಶಸ್ವಿಯಾಗಿದ್ದೇವೆ.

ಸಾಂಕ್ರಾಮಿಕದ ಆರ್ಥಿಕ ಪರಿಣಾಮವು ಅದರ ಆರೋಗ್ಯದ ಪರಿಣಾಮದಂತೆಯೇ ಹಾನಿಕಾರಕವಾಗಿದೆ. ಸರ್ಕಾರವು ಕೆಳ ಮಧ್ಯಮ ವರ್ಗಗಳು ಮತ್ತು ಬಡವರ ಬಗ್ಗೆ ಕಾಳಜಿ ಹೊಂದಿದೆ, ಜೊತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬಗ್ಗೆ ಕಾಳಜಿ ವಹಿಸಿದೆ. ಲಾಕ್‌ಡೌನ್‌ ಮತ್ತು ನಿರ್ಬಂಧಗಳಿಂದಾಗಿ ಸಂಕಷ್ಟಗಳನ್ನು ಎದುರಿಸುತ್ತಿರುವ ಕಾರ್ಮಿಕರ ಮತ್ತು ಉದ್ಯೋಗದಾತರ ಅಗತ್ಯಗಳಿಗೆ ಸರ್ಕಾರ ಕಳೆದ ವರ್ಷ ಸರಣಿ ಪರಿಹಾರ ಕ್ರಮಗಳನ್ನು ಕೈಗೊಂಡಿತ್ತು. ಈ ವರ್ಷ ಕೂಡ ಸರ್ಕಾರವು ಮೇ ಮತ್ತು ಜೂನ್‌ನಲ್ಲಿ ಸುಮಾರು 80 ಕೋಟಿ ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸಿದೆ. ಈ ಪ್ರಯೋಜನವನ್ನು ದೀಪಾವಳಿಯವರೆಗೆ ವಿಸ್ತರಿಸಲಾಗಿದೆ. ಇದಲ್ಲದೆ, ಸರ್ಕಾರವು ಆಯ್ದ ಕೋವಿಡ್ ಪೀಡಿತ ವಲಯಗಳನ್ನು ಉತ್ತೇಜಿಸಲು 6 ಲಕ್ಷ 28 ಸಾವಿರ ಕೋಟಿ ರೂಪಾಯಿ ಮೌಲ್ಯದ ಪ್ಯಾಕೇಜ್ ಅನ್ನು ಘೋಷಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ವೈದ್ಯಕೀಯ ಸೌಲಭ್ಯಗಳ ವಿಸ್ತರಣೆಗಾಗಿ ಒಂದು ವರ್ಷದಲ್ಲಿ 23 ಸಾವಿರದ 220 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಎಂಬುದು ಶ್ಲಾಘನೀಯ.

ನಮ್ಮ ದೇಶದಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನದ ಅಡಿಯಲ್ಲಿ, ಇದುವರೆಗೆ 50 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ. ಇನ್ನೂ ಲಸಿಕೆ ಪಡೆಯದ ಅರ್ಹರು ಆದಷ್ಟು ಶೀಘ್ರದಲ್ಲಿ ಲಸಿಕೆ ಪಡೆದು ಇತರರಿಗೆ ಸ್ಫೂರ್ತಿ ನೀಡಬೇಕು ಎಂದು ರಾಷ್ಟ್ರಪತಿ ಕರೆ ನೀಡಿದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿದ್ದ ದೇಶಭಕ್ತಿ ಮತ್ತು ತ್ಯಾಗ ಮನೋಭಾವ ಅತ್ಯುನ್ನತವಾದುದು. ಅವರು ತಮ್ಮ ಸ್ವಂತ ಹಿತಾಸಕ್ತಿಗಳನ್ನು ನೋಡಿಕೊಳ್ಳದೆ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿದರು. ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ, ಲಕ್ಷಾಂತರ ಜನರು ಮಾನವೀಯತೆಯಿಂದ ನಿಸ್ವಾರ್ಥ ಸೇವೆಯ ಮನೋಭಾವದಿಂದ ಇತರರನ್ನು ರಕ್ಷಿಸಲು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ. ಅಂತಹ ಎಲ್ಲಾ ಕೋವಿಡ್ ಸೇನಾನಿಗಳ ಕಾರ್ಯ ನಮಗೆಲ್ಲ ಪ್ರೇರಣೆ.

75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವವನ್ನು ಆಚರಿಸುವಾಗ, 2047 ರ ಸಂದರ್ಭದಲ್ಲಿ ಸ್ವಾತಂತ್ರ್ಯದ 100 ವರ್ಷಗಳ ಆಚರಣೆಯ ಸಂದರ್ಭ ಶಕ್ತಿಯುತ, ಸಮೃದ್ಧ ಭಾರತ ನನ್ನ ಕಣ್ಣ ಮುಂದೆ ಬರುತ್ತಿದೆ. ಕೋವಿಡ್ ಸಾಂಕ್ರಾಮಿಕ ದೂರವಾಗಿ ನಮ್ಮ ದೇಶ ಸುಖ, ಸಂತೋಷ ಮತ್ತು ಸಮೃದ್ಧಿಯ ಹಾದಿಯಲ್ಲಿ ಮುಂದುವರಿಯಬೇಕೆಂದು ಬಯಸುತ್ತೇನೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.