ನವದೆಹಲಿ, ಡಿ.28: ಡಿಸೆಂಬರ್ 30 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಾಗರಿಕ ಸೌಲಭ್ಯಗಳನ್ನು ನವೀಕರಿಸಲು ಮತ್ತು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರೂ.11,100 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿಯ (ಪಿ.ಎಮ್.ಓ) ಹೇಳಿಕೆಯ ಪ್ರಕಾರ, ಡಿಸೆಂಬರ್ 30 ರಂದು ಬೆಳಿಗ್ಗೆ 11.15 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಮತ್ತು ಹೊಸ ಅಮೃತ್ ಭಾರತ್ ರೈಲುಗಳಿಗೆ ಮತ್ತು ಮಂಗಳೂರು- ಮಡಗಾಂವ್ ಸೇರಿದಂತೆ ಇತರ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಅಂದು ಅವರು ಇನ್ನೂ ಹಲವಾರು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ವಿಮಾನ ನಿಲ್ದಾಣವನ್ನು ಕೂಡ ಪ್ರಧಾನಿ ಉದ್ಘಾಟಿಸಲಿದ್ದಾರೆ.