ನವದೆಹಲಿ: ಜೂನ್ 2022ರ ತಿಂಗಳಲ್ಲಿ ಒಟ್ಟು 1,44,616 ಕೋಟಿ ರೂ. ಜಿಎಸ್‌ಟಿ ಆದಾಯವು ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್‌ಟಿ 25,306 ಕೋಟಿ, ಎಸ್‌ಜಿಎಸ್‌ಟಿ 2,406 ಕೋಟಿ, ಐಜಿಎಸ್‌ಟಿ 75887 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 40102 ಕೋಟಿ ಸೇರಿದಂತೆ) ಮತ್ತು ಸೆಸ್ 11,018 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1197 ಕೋಟಿ ಸೇರಿದಂತೆ) ಸೇರಿದೆ. ಜೂನ್ 2022ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಏಪ್ರಿಲ್ 2022ರ 1,67,540 ಕೋಟಿ ರೂ. ಸಂಗ್ರಹದ ಬಳಿಕ ಎರಡನೇ ಗರಿಷ್ಠ ಜಿಎಸ್‌ಟಿ ಆದಾಯ ದಾಖಲೆ ಎನಿಸಿದೆ.
ಸರಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 29,588 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ 24,235 ಕೋಟಿ ಪಾವತಿಸಿದೆ. ಇದಲ್ಲದೆ, ಕೇಂದ್ರವು ಈ ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಡುವೆ 50:50ರ ಅನುಪಾತದಲ್ಲಿ ತಾತ್ಕಾಲಿಕ ಆಧಾರದ ಮೇಲೆ 27,000 ಕೋಟಿ ಐಜಿಎಸ್‌ಟಿಯನ್ನು ಇತ್ಯರ್ಥಪಡಿಸಿದೆ. ಜೂನ್ 2022ರ ತಿಂಗಳಲ್ಲಿ ನಿಯಮಿತ ಮತ್ತು ತಾತ್ಕಾಲಿಕ ಇತ್ಯರ್ಥದ ನಂತರ ಕೇಂದ್ರಮತ್ತು ರಾಜ್ಯಗಳ ಒಟ್ಟು ಆದಾಯವು ಕ್ರಮವಾಗಿ ಸಿಜಿಎಸ್‌ಟಿಯಿಂದ 68,394 ಕೋಟಿ ಮತ್ತು ಎಸ್‌ಜಿಎಸ್‌ಟಿಯಿಂದ 70,141 ಕೋಟಿಯಾಗಿದೆ.
ಜೂನ್ 2022ರ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿನ ಜಿಎಸ್‌ಟಿ ಆದಾಯವಾದ 92,800 ಕೋಟಿಗೆ ಹೋಲಿಸಿದರೆ 56% ಅಧಿಕವಾಗಿದೆ. ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು 55% ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯವು (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬರುವ ಆದಾಯಕ್ಕಿಂತ 56% ಹೆಚ್ಚಾಗಿದೆ.
ಜಿಎಸ್‌ಟಿ ಪ್ರಾರಂಭವಾದಾಗಿನಿಂದ ಮಾಸಿಕ ಜಿಎಸ್‌ಟಿ ಸಂಗ್ರಹವು ಐದನೇ ಬಾರಿ ಮತ್ತು ಮಾರ್ಚ್ 2022 ರಿಂದ ಸತತ ನಾಲ್ಕನೇ ತಿಂಗಳು 1.40 ಲಕ್ಷ ಕೋಟಿ ದಾಟಿದೆ. ಜೂನ್ 2022ರಲ್ಲಿ ಆದ ಆದಾಯ ಸಂಗ್ರಹವು ಎರಡು ಕಾರಣಗಳಿಗೆ ವಿಶೇಷವೆನಿಸಿದೆ. ಮೊದಲನೆಯದಾಗಿ ಇದು ಎರಡನೇ ಅತ್ಯಧಿಕ ದಾಖಲೆ ಎನಿಸಿದೆ. ಎರಡನೆಯದಾಗಿ, ಈ ಹಿಂದಿನ ವರ್ಷಗಳಲ್ಲಿ ಕಂಡು ಬರುತ್ತಿದ್ದ ಸಂಗ್ರಹ ಇಳಿಕೆ ತಿಂಗಳೆಂಬ ಪ್ರವೃತ್ತಿಯಿಂದ ಈ ಮಾಸವು ಹೊರಬಂದಿದೆ. 2022ರ ಮೇ ತಿಂಗಳಲ್ಲಿ ಒಟ್ಟು 7.3 ಕೋಟಿ ರೂ.ಗಳ ʻಇ-ವೇ ಬಿಲ್ʼಗಳನ್ನು ಸೃಷ್ಟಿಸಲಾಗಿದ್ದು, ಈ ಪ್ರಮಾಣವು ಏಪ್ರಿಲ್ 2022ರಲ್ಲಿ ಸೃಷ್ಟಿಯಾದ 7.4 ಕೋಟಿ ’ಇ-ವೇ ಬಿಲ್ʼಗಳಿಗಿಂತ 2% ಕಡಿಮೆಯಾಗಿದೆ.
2022-23ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರಾಸರಿ ಮಾಸಿಕ ಒಟ್ಟು ಜಿಎಸ್‌ಟಿ ಸಂಗ್ರಹವು 1.51 ಲಕ್ಷ ಕೋಟಿಯಷ್ಟಿದ್ದು, ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದ್ದ 1.10 ಲಕ್ಷ ಕೋಟಿ ಸರಾಸರಿ ಮಾಸಿಕ ಸಂಗ್ರಹಕ್ಕೆ ಹೋಲಿಸಿದರೆ ಇದು ಶೇ.37ರಷ್ಟು ಹೆಚ್ಚಳವಾಗಿದೆ. ಆರ್ಥಿಕ ಚೇತರಿಕೆಯ ಜೊತೆಗೆ, ವಂಚನೆ-ತಡೆ ಉಪಕ್ರಮಗಳು, ವಿಶೇಷವಾಗಿ ನಕಲಿ ಬಿಲ್ಲರ್‌ಗಳ ವಿರುದ್ಧದ ಕ್ರಮಗಳು ಜಿಎಸ್‌ಟಿ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿವೆ. ಈ ತಿಂಗಳಲ್ಲಿ ಒಟ್ಟು ಸೆಸ್ ಸಂಗ್ರಹವು, ಜಿಎಸ್‌ಟಿಯನ್ನು ಜಾರಿಗೊಳಿಸಿದ ನಂತರ ಅತ್ಯಧಿಕವೆನಿಸಿದೆ.